ಉತ್ತರ ಕನ್ನಡ: ಕಳೆದ ಜೂನ್, ಜುಲೈ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಉಂಟಾಗಿತ್ತು. ಘಟನೆಯಲ್ಲಿ ಸಾವು-ನೋವು ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಜುಲೈ 16ರಂದು ಬೃಹತ್ ಗುಡ್ಡ ಕುಸಿದು ಗಂಗಾವಳಿ ನದಿಯ ಪಾಲಾಗಿತ್ತು. 11 ಜನರು ಕಣ್ಮರೆಯಾಗಿದ್ದರು.
ಫೆಂಗಾಲ್ ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ದಕ್ಷಿಣ ಒಳನಾಡಿನಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಹೆಳಿದ್ದಾರೆ. ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 1 ಸೆಂ.ಮೀ ಮಳೆ ಸುರಿದಿದೆ. ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ಇದರಿಂದ ಗರಿಷ್ಠ ತಾಪಮಾನ ಇಳಿಕೆಯಾಗಿದೆ.
ಫೆಂಗಾಲ್ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಪುದುಚೇರಿ ಕರಾವಳಿ ತೀರದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಡಿ.1 ರಿಂದ ಡಿ.3 ರವರೆಗೆ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಡಿ.3 ರವರೆಗೆ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಲ್ಲೂ ಅಲ್ಲಲ್ಲಿ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಯ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಡಿ.2 ಹಾಗೂ 3 ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 3 ದಿನ ಕನಿಷ್ಠ ಉಷ್ಣಾಂಶ ಸುಮಾರು 19 ಡಿಗ್ರಿ ಸೆಂಟಿಗ್ರೇಡ್ ಹಾಗೂ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಂಟಿಗ್ರೇಡ್ ಇರಲಿದೆ. ಒಟ್ಟಾರೆ ಫೆಂಗಲ್ ಚಂಡಮಾರುತ ಪ್ರಭಾವದಿಂದ ತಮಿಳುನಾಡು, ಪುದುಚೇರಿ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಹಲವೆಡೆ ಮಳೆಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ರಾಗಿಹೊಸಳ್ಳಿ, ಕಸಗೆ, ಬಂಡಳದಲ್ಲಿ 3 ಸೆಕೆಂಡ್ ಭೂಮಿ ಕಂಪಿಸಿದ್ದು, ಜನರು ಒಂದು ಕ್ಷಣ ಭಯಭೀತರಾಗಿದ್ದಾರೆ. ಕುಮಾಟಾ-ಶಿರಸಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ.
ಗುಡ್ಡ ಕೊರೆದು ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಆರಂಭದಲ್ಲಿ, ಬಂಡೆ ಕಲ್ಲುಗಳನ್ನು ಸಿಡಿಸಿರಬಹದು ಎಂದು ಊಹಿಸಲಾಗಿತ್ತು. ಆದರೆ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ. ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂ ಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.