ಕಲಬುರಗಿ : ರಾಜ್ಯದ ಎಲ್ಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ನೀಡುತ್ತಿರುವ ‘ಪೂರಕ ಪೌಷ್ಟಿಕ ಆಹಾರ ವಿತರಣೆ’ ಯೋಜನೆಯನ್ನು ಎನ್‌ಜಿಒಗಳಿಗೆ ವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದಿಂದ ಎರಡು ದಿನ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಾಲ್ಕು ದಿನ ಮೊಟ್ಟೆ, ಬಾಳೆಹಣ್ಣು ,ಶೇಂಗಾ, ಚಕ್ಕಿ ವಿತರಿಸುವ ಯೋಜನೆಯು ಮಕ್ಕಳ ದೈಹಿಕ ಬೌದ್ಧಿಕ ಮಾನಸಿಕ ವಿಕಸನಕ್ಕೆ ಪೂರಕವಾಗಿದೆ, ಆದರೆ ಈ ಯೋಜನೆಯ ಕೆಲವು ಕಾರಣಗಳಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹಾಗೂ ಮುಖ್ಯ ಗುರುಗಳ ಕಾರ್ಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಈ ವಿತರಣೆಯ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಕ್ಕಿ ವಿತರಿಸುವಲ್ಲಿ ಮುಖ್ಯ ಗುರುಗಳಿಗೆ ಜವಾಬ್ದಾರಿ ವಹಿಸಿದ್ದರಿಂದ ಅವರು ಶೈಕ್ಷಣಿಕವಾಗಿ ಮಕ್ಕಳಿಗೆ ಪಾಠಭೋಧನೆ ಮಾಡುವುದಾಗಲಿ ಮತ್ತೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡುತ್ತಿದ್ದಾರೆ. ಹಾಗಾಗಿ ಇದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.
ಈ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದರೆ ಶಿಕ್ಷಕರಿಗೆ ಪಾಠ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಕುರಿತಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದ್ದೇನೆ, ಈವರೆಗೆ ಯಾವುದೇ ಧನಾತ್ಮಕ ಸ್ಪಂದನೆ ಸಿಕ್ಕಿಲ್ಲ, ಯೋಜನೆ ವಿತರಣೆ ಜವಾಬ್ದಾರಿಯನ್ನು ಉತ್ತಮ ಎನ್ಜಿಒಗಳಿಗೆ ವಹಿಸಿದರೆ ಒಳ್ಳೆಯದಾಗುತ್ತದೆ.
ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದ ಅವರು, ಅಧಿವೇಶನ ಪ್ರಾರಂಭವಾಗುವುದಕ್ಕಿಂತ ಮೊದಲು ಈ ಕೆಲಸ ಮಾಡಬೇಕು, ಇಲ್ಲದಿದ್ದರೆ ಈ ಕುರಿತಾಗಿ ಚರ್ಚಿಸಲು ಸದನದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು.