ಹೈದರಾಬಾದ್ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಉದ್ಯೋಗಿಗಳ ಗರಿಷ್ಠ ವೇತನ ಮಿತಿಯನ್ನು ಹೆಚ್ಚಿಸಲು ಕೇಂದ್ರವು ಯೋಜಿಸುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಸದ್ಯ 15 ಸಾವಿರ ರೂ.ಗಳ ಮಿತಿ ಇದ್ದು, 21 ಸಾವಿರಕ್ಕೆ ಏರಿಕೆಯಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇದನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಹೀಗಾಗಿ, ಸರ್ಕಾರ ಇದೀಗ ಮತ್ತೊಮ್ಮೆ ಈ ಬಗ್ಗೆ ಗಮನಹರಿಸಿದೆ ಎಂದು ವರದಿಯಾಗಿದೆ.
ಉದ್ಯೋಗಿಗಳ ಸಂಖ್ಯೆಯನ್ನು ಅವಲಂಬಿಸಿ EPFO ನೊಂದಿಗೆ ಕಂಪನಿಗಳ ನೋಂದಣಿ ಕಡ್ಡಾಯವಾಗಿದೆ. ಆದರೆ, ಈಗ ಉದ್ಯೋಗಿಗಳ ಸಂಖ್ಯೆಯ ಮಿತಿಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂಬುದು ತಿಳಿದುಬಂದಿದೆ. ಪ್ರಸ್ತುತ, 20 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಇಪಿಎಫ್‌ಒಗೆ ಸೇರಬೇಕಾಗುತ್ತದೆ. ಆದರೆ ಈ ಸಂಖ್ಯೆ 10ರಿಂದ 15ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.
ಈ ಪ್ರಸ್ತಾವನೆಗೆ ಸಣ್ಣ ಮತ್ತು ಮಧ್ಯಮ ಕಂಪನಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ವರದಿಗಳಿವೆ. ವೇತನ ಮಿತಿಯನ್ನು ಹೆಚ್ಚಿಸುವುದರಿಂದ ಸರ್ಕಾರ ಹಾಗೂ ಖಾಸಗಿ ವಲಯದ ಮೇಲೆ ಹೊರೆ ಬೀಳಲಿದೆ. ಇದರಿಂದ ಉದ್ಯೋಗಿಗಳಿಗೆ ಮಾತ್ರ ಅನುಕೂಲವಾಗಲಿದೆ.
ಇಪಿಎಫ್‌ಒ ಗರಿಷ್ಠ ವೇತನ ಮಿತಿಯನ್ನು ಕೊನೆಯದಾಗಿ 2014ರಲ್ಲಿ ಪರಿಷ್ಕರಿಸಲಾಗಿತ್ತು. ಆಗ 6,500 ರೂ. ನಿಂದ 15 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು.
ಲಾಭ ಹೆಚ್ಚಾದರೆ, ವೇತನ ಮಿತಿ ಹೆಚ್ಚಿಸಿದರೆ, ನೌಕರರ ಭವಿಷ್ಯ ನಿಧಿ ಖಾತೆಗೆ ಜಮಾ ಆಗುವ ಮೊತ್ತವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ನೌಕರನ ಪಾಲು ವೇತನದ 12 ಪ್ರತಿಶತ ಮತ್ತು ಉದ್ಯೋಗದಾತರ ಪಾಲು 12 ಪ್ರತಿಶತ ಇರಲಿದೆ.
ಉದ್ಯೋಗಿಗಳ ಪಾಲು ಸಂಪೂರ್ಣವಾಗಿ ಇಪಿಎಫ್ ಖಾತೆಯಲ್ಲಿ ಜಮೆಯಾಗುತ್ತದೆ.
8.33 ರಷ್ಟು ಉದ್ಯೋಗದಾತರ ಪಾಲು ಪಿಂಚಣಿ ಯೋಜನೆಯಲ್ಲಿ ಠೇವಣಿಯಾಗಲಿದೆ. ಉಳಿದ ಮೊತ್ತವನ್ನು ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ
. ಗರಿಷ್ಠ ವೇತನ ಮಿತಿಯನ್ನು ಹೆಚ್ಚಿಸಿದರೆ, ಉದ್ಯೋಗಿಗಳು ಮತ್ತು ಉದ್ಯೋಗದಾತರು ಪಾವತಿಸಬೇಕಾದ ಪಾಲು ಕೂಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಇಪಿಎಫ್‌ಒ ಮತ್ತು ಇಪಿಎಸ್ ಖಾತೆಯಲ್ಲಿ ಠೇವಣಿ ಮಾಡುವ ಮೊತ್ತವು ಹೆಚ್ಚಾಗುತ್ತದೆ.
ಇದು ಉದ್ಯೋಗಿಗಳಿಗೆ ನಿವೃತ್ತಿಯ ಸಮಯದಲ್ಲಿ ತಮ್ಮ ಭವಿಷ್ಯ ನಿಧಿ ಮೀಸಲು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.