ಬೆಂಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಗೆಳತಿ ಎಂಬ ವಿಶೇಷ ಚಿಕಿತ್ಸಾ ಘಟಕಗಳನ್ನು ತೆರೆದಂತೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯಗಳನ್ನು ಕಲ್ಪಿಸುವ ಘಟಕಗಳು ‘ಒನ್ ಸ್ಟಾಪ್ ಸೆಂಟರ್’ ಎಂಬ ಹೊಸ ಹೆಸರಿನೊಂದಿಗೆ ಹೊಸ ರೂಪದಲ್ಲಿ ಬರಲು ಅಣಿಯಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ.
ಈ ಘಟಕಗಳು ಜಿಲ್ಲಾಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಬೇಕಾದ ಆಶ್ರಯ, ಊಟ, ವಸತಿ, ಚಿಕಿತ್ಸೆ, ಮಾನಸಿಕ ಸದೃಢತೆಗಾಗಿ ಕೌನ್ಸೆಲಿಂಗ್, ವಕೀಲರು, ರಕ್ಷಣೆಗಾಗಿ ಪೊಲೀಸರು ಹೀಗೆ ಅಗತ್ಯ ಸೌಲಭ್ಯಗಳು ತಕ್ಷಣ ಸಿಗುತ್ತಿರಲಿಲ್ಲ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿ, ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸುವ ಮೂಲಕ ಒನ್ ಸ್ಟಾಪ್ ಸೆಂಟರ್ (ಸಖಿ)ಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ ಕೇಂದ್ರ ಸರಕಾರ ಈಗಾಗಲೇ ಪ್ರತಿ ಜಿಲ್ಲೆಗೂ ತಲಾ 48 ಲಕ್ಷ ರೂ. ಅನುದಾನವನ್ನೂ ಬಿಡುಗಡೆ ಮಾಡಿದೆ.
ಗೆಳತಿ ಕೇಂದ್ರಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಸಂಕಷ್ಟಕ್ಕೆ ಸಿಲುಕಿರುವವರು ಸಹಾಯವಾಣಿ (181)ಗೆ ಕರೆ ಮಾಡಿದರೆ, ಯಾರೂ ಸ್ವೀಕರಿಸುವುದಿಲ್ಲಎಂಬ ದೂರುಗಳು ಬರುತ್ತಿದ್ದವು. ಇನ್ನು ಮುಂದೆ ಅಂತಹ ಸಮಸ್ಯೆಯಿರುವುದಿಲ್ಲ.
ಕುಟುಂಬ ಸದಸ್ಯರಿಂದ ದೈಹಿಕವಾಗಿ ಹಲ್ಲೆಗೆ ಒಳಗಾದ ಅಥವಾ ಇತರೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಏಕಕಾಲಕ್ಕೆ ವಸತಿ, ಊಟ, ಕೌನ್ಸೆಲಿಂಗ್, ಚಿಕಿತ್ಸೆ ಹಾಗೂ ರಕ್ಷಣೆ ಬೇಕಿರುತ್ತದೆ.
ನಿಗದಿತ ಅವಧಿಯಲ್ಲಿ ಕೆಲಸಗಳು ನಡೆದರೆ, ಎಲ್ಲಾ ತರಹದ ದಮನಿತ ಹೆಣ್ಣು ಮಕ್ಕಳು 2020ರ ಕೊನೆಯ ವೇಳೆಗೆ ‘ಒನ್ ಸ್ಟಾಪ್ ಸೆಂಟರ್’ಗಳಲ್ಲಿ(ಸ್ವಂತ ಕಟ್ಟಡಗಳಲ್ಲಿ) ನಿರಾತಂಕವಾಗಿ ತಮಗೆ ಬೇಕಾದ ಸೇವಾ ಸೌಲಭ್ಯಗಳನ್ನು ಪಡೆಯಬಹುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾ ನಿರ್ದೇಶಕರಾದ ಕೆ.ಎ. ದಯಾನಂದ ತಿಳಿಸಿದ್ದಾರೆ.
ಒಂದೊಂದು ಸೇವೆಗೂ ಒಂದೊಂದು ಕಡೆ ಹೋಗುವುದು ಬೇಡ. ಇವೆಲ್ಲವೂ ಒಂದೇ ಕಡೆ ಸಿಕ್ಕರೆ ಅಲೆದಾಡುವುದು ತಪ್ಪುತ್ತದೆ. ಹೀಗಾಗಿ ಇದೇ ಪರಿಕಲ್ಪನೆಯಡಿ ಒನ್ ಸ್ಟಾಪ್ ಸೆಂಟರ್ ಎಂಬ ಹೆಸರಿನಡಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.