ಬೆಂಗಳೂರು: ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದಲ್ಲಿ ಇಲಾಖೆಯು ನೀಲಗಿರಿ ಮರಗಳನ್ನು ತೆರವುಗೊಳಿಸುತ್ತಿದೆ, ಇದರ ಜೊತೆಗೆ ಹುಲ್ಲುಗಾವಲುಗಳನ್ನು ತೆರವುಗೊಳಿಸಿ ಸಸ್ಯಾಹಾರಿ ಪ್ರಭೇದಗಳ ಆವಾಸಸ್ಥಾನವನ್ನು ಸುಧಾರಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ಪ್ರಮುಖ ಅರಣ್ಯ ಪ್ರದೇಶಗಳ ಒತ್ತಡವನ್ನು ತಗ್ಗಿಸಲು, ಹುಲ್ಲುಗಾವಲುಗಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ರಾಜ್ಯ ಅರಣ್ಯ ಇಲಾಖೆಯು ನೀಲಗಿರಿ ಮರಗಳನ್ನು ತೆರವುಗೊಳಿಸುತ್ತಿದೆ, ಹುಲ್ಲುಗಾವಲು ಭೂಪ್ರದೇಶಗಳನ್ನು ಸುಧಾರಿಸುತ್ತಿದೆ ಜೊತೆಗೆ ಸಫಾರಿಯನ್ನು ಪ್ರಾರಂಭಿಸುತ್ತಿದೆ.
ಇಲಾಖೆಯು ಸುತ್ತಮುತ್ತಲಿನ ಗ್ರಾಮಸ್ಥರ ಜೊತೆಗೆ ಸಮನ್ವಯತೆಯೊಂದಿಗೆ ಈ ಪ್ರದೇಶದಲ್ಲಿ ಸಫಾರಿಯನ್ನು ಪ್ರಾರಂಭಿಸಿತು. ಇದು ಮಾನವ-ಪ್ರಾಣಿ ಸಂಘರ್ಷ ಕಡಿಮೆ ಮಾಡಲು ಸಹಕಾರಿಯಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ನಾವು ಇಲಾಖೆಯ ಜೀಪ್‌ಗಳನ್ನು ಬಳಸಿಕೊಂಡು ಒಂದು ತಿಂಗಳ ಹಿಂದೆ ಸಫಾರಿ ಪ್ರಾರಂಭಿಸಿದ್ದೇವೆ. ಈ ಹಿಂದೆ ಖಾಸಗಿ ವಾಹನಗಳನ್ನು ಬಳಸಲಾಗುತ್ತಿತ್ತು, ಇದರಿಂದ ಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು, ಈಗ ಜನಸಂದಣಿ ಮತ್ತು ಆದಾಯ ಹೆಚ್ಚಾಗಿದೆ ಎಂದು ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಹೇಳಿದರು.
ನೆಲದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಲು ಅವರನ್ನು ಸಫಾರಿಗಳಿಗೆ ಕರೆದೊಯ್ಯಲಾಗುತ್ತದೆ ಎಂದು ಇನ್ನೊಬ್ಬ ಅರಣ್ಯ ಇಲಾಖೆ ಅಧಿಕಾರಿ ಹೇಳಿದರು. ಈಗ ಪ್ರಾಣಿಗಳ ಆವಾಸಸ್ಥಾನ ಸುಧಾರಣೆ ಕಾರ್ಯಗಳು ಪ್ರಾರಂಭವಾಗಿರುವುದರಿಂದ, 1960 ಮತ್ತು 70 ರ ದಶಕದಲ್ಲಿ ಈ ಪ್ರದೇಶದಲ್ಲಿ ವಾಸವಾಗಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳನ್ನು ಮರಳಿ ಕರೆತರಲು ಅರಣ್ಯ ಇಲಾಖೆಯು ಪ್ರಯತ್ನ ನಡೆಸುತ್ತಿದೆ. ನೀಲಗಿರಿ ನೆಡು ತೋಪು ಹಾಗೂ ಕಳೆಗಳ ಹೆಚ್ಚುವಿಕೆಯಿಂದಾಗಿ ಪಕ್ಷಿಗಳು ಪ್ರದೇಶವನ್ನು ತೊರೆದವು ಮತ್ತು ಹಲವು ಪಕ್ಷಿಗಳು ಸಾವನ್ನಪ್ಪಿದವು, ಹೀಗಾಗಿ ಹುಲ್ಲುಗಾವಲು ಪ್ರದೇಶವನ್ನು ತೆರವುಗೊಳಿಸಲಾಯಿತು, 2017 ರಲ್ಲಿ ಸುಮಾರು 7400 ರಷ್ಟಿದ್ದ ಬ್ಲಾಕ್‌ಬಕ್ ಜನಸಂಖ್ಯೆಯು ಈಗ 10,000 ಕ್ಕೆ ಏರಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ಅಭಯಾರಣ್ಯದಲ್ಲಿ ಕೆಲಸ ಮಾಡಿದ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಮಾತನಾಡಿ, ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳನ್ನು ಮರಳಿ ತರಲು ಪ್ರಬಲವಾದ ಸಂರಕ್ಷಣಾ ಕ್ರಮಗಳು ಬೇಕಾಗುತ್ತವೆ. ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ ಮರಗಳಿಗೆ ಕೊಡಲಿ ಹಾಕಲು ಕೇಂದ್ರ ಸರ್ಕಾರ ಕಾನೂನು ಅನುಮತಿ ನೀಡಿದ್ದು, ಈಗ ಎಲ್ಲಾ ಹುಲ್ಲುಗಾವಲುಗಳಲ್ಲಿ, ವಿಶೇಷವಾಗಿ ರಾಣೆಬೆನ್ನೂರಿನಲ್ಲಿ ಆವಾಸಸ್ಥಾನಗಳನ್ನು ಸುಧಾರಿಸುವ ಕಾರ್ಯವು ವೇಗವಾಗಿ ನಡೆಯಬೇಕು ಎಂದು ಹೇಳಿದ್ದಾರೆ.
ಅಭಯಾರಣ್ಯದಿಂದ ನೀಲಗಿರಿ ನೆಡುತೋಪುಗಳನ್ನು ತೆಗೆದುಹಾಕಬೇಕೆಂದು ಇತ್ತೀಚೆಗೆ ನಿರ್ಧರಿಸಲಾಗಿದೆ ಹೀಗಾಗಿ ಕೃಷ್ಣಮೃಗಗಳ ಸಂಖ್ಯೆ ಸುಧಾರಿಸುತ್ತಿದೆ. ಇಷ್ಟೇ ಅಲ್ಲ ನರಿ, ಚಿರತೆ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕೃಷ್ಣಮೃಗಗಳು ಬೆಳೆಗಳ ಮೇಲೆ ದಾಳಿ ಮಾಡುವ ಘಟನೆಗಳೂ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರದೇಶವನ್ನು ಉತ್ತಮವಾಗಿ ರಕ್ಷಿಸಲು ಸ್ಥಳೀಯರು ಮತ್ತು ಗ್ರಾಮಸ್ಥರು ಸಂರಕ್ಷಣಾ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.