ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ 19ರವರೆಗೆ 9 ದಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನಕ್ಕೆ 19 ಕೋಟಿ ರೂ. ವೆಚ್ಚವಾಗಲಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ 7 ಕೋಟಿ ರೂ. ಖರ್ಚಾಗಲಿದ್ದು, ಹಿಂದಿನ ವರ್ಷ ಒಟ್ಟು 18 ಕೋಟಿ ಖರ್ಚಾಗಿತ್ತು. ಆ ವೆಚ್ಚವನ್ನು ಆಧರಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಪ್ರತೀ ವರ್ಷವೂ ಅಧಿವೇಶನದ ಖರ್ಚಿನಲ್ಲಿ ವಾಸ್ತವ್ಯಕ್ಕೆ ಸಿಂಹ ಪಾಲಿದೆ. ಈ ಹಣ ಉಳಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ನಿರ್ಮಿಸುವ ದಶಕದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.
ಅಧಿವೇಶನದ ವೇಳೆ ಪ್ರತಿಭಟನಾ ಸ್ಥಳಕ್ಕಾಗಿ 8.50 ಲಕ್ಷ ರೂ. ಸ್ವಚ್ಛತಾ ಸಿಬ್ಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗೆ 25 ಲಕ್ಷ ರೂ. ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 15 ಲಕ್ಷ ರೂ. ಅಧಿವೇಶನ ಮಾಹಿತಿ ಕೈಪಿಡಿ, ವಿವಿಧ ಗುರುತಿನ ಚೀಟಿಗಾಗಿ 4 ಲಕ್ಷ ರೂ. ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ವಾಹನ ಚಾಲಕರಿಗೆ ನಿರ್ವಹಣಾ ವೆಚ್ಚ 25 ಸಾವಿರ ರೂ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬೇಡಿಕೆ ಸಲ್ಲಿಸಿದ್ದಾರೆ.
ಸಚಿವ, ಶಾಸಕ, ಅಧಿಕಾರಿ ಹಾಗೂ ಸಿಬ್ಬಂದಿಯ ಊಟದ ಖರ್ಚಿಗೆ 2.80 ಕೋಟಿ ರೂ ಖರ್ಚಾಗಲಿದೆ. ಮಾರ್ಷಲ್‌ಗಳ ಓಡಾಟ, ಪೊಲೀಸ್ ಬಂದೋಬಸ್ತ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸೇವೆ ಸೇರಿ ಒಟ್ಟಾರೆ 1.20 ಕೋಟಿ ರೂ. ವೆಚ್ಚವಾಗಲಿದೆ. ಸುವರ್ಣ ವಿಧಾನಸೌಧ ಸೇರಿ ಗಣ್ಯರು ತಂಗಿದ ಸ್ಥಳಗಳಲ್ಲಿ ಇಂಟರ್‌ನೆಟ್ ಸೌಲಭ್ಯ, ದೂರವಾಣಿ ವ್ಯವಸ್ಥೆಗೆ 44 ಲಕ್ಷ ರೂ. ವಾಹನಗಳ ಇಂಧನಕ್ಕಾಗಿ 45 ಲಕ್ಷ ರೂ. ಅಧಿವೇಶನ ವೇಳೆ ತುರ್ತಾಗಿ ಬಾಡಿಗೆ ವಾಹನ ಪಡೆಯಲು 25 ಲಕ್ಷ ರೂ. ವಾಹನ ಚಾಲಕರ ವಸತಿ ವ್ಯವಸ್ಥೆಗೆ 20 ಲಕ್ಷ ರೂ. ಸೌಧವನ್ನು ಹೂಗಳಿಂದ ಅಲಂಕಾರಗೊಳಿಸಲು 15 ಲಕ್ಷ ರೂ. ಖರ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
”ಬೆಳಗಾವಿಯಲ್ಲಿ ಸೌಧ ನಿರ್ಮಾಣವಾದ ಸಂದರ್ಭದಲ್ಲೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಇಲ್ಲಿ ಶಾಸಕರ ಭವನ ನಿರ್ಮಾಣದ ವಾಗ್ದಾನ ಮಾಡಿದ್ದರು. ಆದರೆ, ಅದು ಇನ್ನೂ ಕೂಡ ಸಾಕಾರವಾಗಿಲ್ಲ. ಅನೇಕ ಸರ್ಕಾರಗಳು ಬಂದು ಹೋದರೂ ಬರೀ ಆಶ್ವಾಸನೆ ಮಾತ್ರ ಕೊಡುತ್ತಿದ್ದಾರೆ. ಅಧಿವೇಶನಕ್ಕೆ ಗಂಟು ಮೂಟೆ ಕಟ್ಟಿಕೊಂಡು ಬರುವ ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಬೆಳಗಾವಿಯಲ್ಲಿರುವ ಎಲ್ಲಾ ಹೋಟೆಲ್, ಲಾಡ್ಜ್ಗಳನ್ನು ಬುಕ್ ಮಾಡಲಾಗುತ್ತದೆ. ಇದಕ್ಕೆ ಕೋಟ್ಯಂತರ ರೂ. ಖರ್ಚಾಗುತ್ತದೆ. ಈವರೆಗೆ ನಡೆದ ಅಧಿವೇಶನಗಳಲ್ಲಿ ವಸತಿಗೆ ವ್ಯಯಿಸಿದ ಖರ್ಚಿನಿಂದ ಒಂದು ಸುಸಜ್ಜಿತ ಶಾಸಕರ ಭವನ ನಿರ್ಮಿಸಬಹುದಿತ್ತು. ಈ ಬಾರಿಯಾದರೂ ಸಿದ್ದರಾಮಯ್ಯನವರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಲಿ” ಎಂದು ಆಗ್ರಹಿಸಿದ್ದಾರೆ.
”ಬೆಳಗಾವಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ(PPP)ದಲ್ಲಿ ಶಾಸಕ ಭವನ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಅಧಿವೇಶನದ ಸಂದರ್ಭದಲ್ಲಿ ಸರ್ಕಾರಕ್ಕೆ ಕಟ್ಟಡ ಬಿಟ್ಟುಕೊಡಬೇಕು. ಇನ್ನುಳಿದ ಸಮಯದಲ್ಲಿ ಖಾಸಗಿಯಾಗಿ ಬಳಕೆ ಮಾಡುವ ವಿಚಾರವಿದೆ. ಈ ಅಧಿವೇಶನದಲ್ಲಿಯೇ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸುತ್ತೇವೆ” ಎಂದು ಶಾಸಕ ಆಸೀಫ್ ಸೇಠ್ ತಿಳಿಸಿದ್ದಾರೆ.
ಮೊಹಮ್ಮದ್ ರೋಷನ್ ಅವರನ್ನು ಸಂಪರ್ಕಿಸಿದಾಗ ಅವರು, ”ಅಧಿವೇಶನದ ಯಶಸ್ಸಿಗೆ 10 ತಂಡಗಳನ್ನು ರಚಿಸಲಾಗಿದೆ. ಸುವರ್ಣ ವಿಧಾನಸೌಧ ಸ್ವಚ್ಛತೆ, ಬಣ್ಣ ಬಳಿಯುವುದು, ಸೌಧ ಸುತ್ತ ಉದ್ಯಾನ ಸೇರಿ ಎಲ್ಲ ರೀತಿ ಕೆಲಸಗಳೂ ನಡೆಯುತ್ತಿವೆ. ಇನ್ನು ಎರಡು ದಿನಗಳಲ್ಲಿ ಅಧಿವೇಶನಕ್ಕೆ ಸೌಧ ಸಂಪೂರ್ಣ ಸಜ್ಜಾಗಲಿದೆ. ಈ ಬಾರಿಯ ಅಧಿವೇಶನ ಖರ್ಚಿಗೆ 19 ಕೋಟಿ ರೂ. ಖರ್ಚಾಗಲಿದ್ದು, ಹಿಂದಿನ ಅಧಿವೇಶನಕ್ಕಿಂತ ಶೇ.10ರಷ್ಟು ಖರ್ಚು ಹೆಚ್ಚಾಗಿದೆ. ಅಧಿವೇಶನ ಯಶಸ್ವಿಯಾಗಿ ನಡೆಯಲಿದ್ದು, ಯಾವುದೇ ರೀತಿ ಅನುದಾನ ಕೊರತೆ ಇಲ್ಲ” ಎಂದು ಹೇಳಿದರು.