ಬೆಂಗಳೂರು: ರಾಗಿ ಕೊಳ್ಳುವವರು ಈ ವರ್ಷ ಬೆಲೆ ಏರಿಕೆಯ ಬಿಸಿ ಅನುಭವಿಸಲಿದ್ದಾರೆ. ಹೌದು ಪ್ರತಿ ಕೆಜಿಯಲ್ಲಿ ಕನಿಷ್ಠ 10 ರುಪಾಯಿ ಏರಿಕೆ ಆಗಿದೆ. ಸಕಾಲದಲ್ಲಿ ಬಾರದ ಮಳೆ, ಒಕ್ಕಣೆ ವೆಚ್ಚ, ಸಾಗಾಣಿಕೆ ವೆಚ್ಚ ಹೆಚ್ಚಳ ಸೇರಿದಂತೆ, ಬೇಡಿಕೆಯೂ ಹೆಚ್ಚಾಗಿರುವುದರಿಂದ ರಾಗಿ ಬೆಲೆ ಹೆಚ್ಚಾಗಿದೆ. ಇನ್ನು ರಾಗಿ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚು ಮಾಡಿದ್ದು ಕ್ವಿಂಟಾಲ್‌ಗೆ 3,846 ರೂಪಾಯಿ ಏರಿಕೆ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ರಾಗಿ ಬಳಕೆ ಪ್ರಮಾಣ ಹೆಚ್ಚಾಗಿದ್ದು, ಚಿಲ್ಲರೆ ದರದಲ್ಲಿರಾಗಿ ಕೆಜಿಗೆ 40-45 ರೂ. ಇದ್ದುದು ಇದೀಗ 55 ರೂ. ಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಈ ಬಾರಿ ಸರಕಾರ ಕೂಡ ಕನಿಷ್ಠ ಬೆಂಬಲ ಬೆಲೆಯಡಿ ರಾಗಿಗೆ ಕ್ವಿಂಟಾಲ್‌ಗೆ 4,290 ರೂ. ನಿಗದಿ ಮಾಡಿದೆ.
ಕಳೆದ ವರ್ಷ ಬೆಂಬಲ ಬೆಲೆಯಡಿ ಕ್ವಿಂಟಾಲ್ ರಾಗಿಗೆ 3,846 ರೂ. ದರ ಇತ್ತು.ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಗೋಧಿಯ ಜತೆಗೆ ರಾಗಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಮುದ್ದೆ, ಗಂಜಿ, ರೊಟ್ಟಿ ರೂಪದಲ್ಲಿ ರಾಗಿಯನ್ನು ಬಳಸಲಾಗುತ್ತಿದೆ. ಪೌಷ್ಟಿಕಭರಿತವಾಗಿರುವುದರಿಂದ ರಾಗಿಯನ್ನು ಮಕ್ಕಳಿಗೂ ಹೆಚ್ಚಾಗಿ ನೀಡಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಹಾಸನ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ರಾಗಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ಅಲ್ಲಲ್ಲಿಸ್ವಲ್ಪ ಪ್ರಮಾಣದಲ್ಲಿ ರಾಗಿ ಬೆಳೆಯಲಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಸುಮಾರು 8.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸುಮಾರು 11.27 ಲಕ್ಷ ಟನ್‌ಗಳಷ್ಟು ರಾಗಿ ಬೆಳೆಯಲಾಗುತ್ತದೆ.
ರಾಜ್ಯದಲ್ಲಿ 2022ರಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಲವೆಡೆ ಬೆಳೆಗೆ ಹಾನಿ ಉಂಟಾಗಿತ್ತು. ಕಳೆದ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಬೆಳೆ ಕೈತಪ್ಪಿತ್ತು. ಹೀಗಾಗಿ ರಾಗಿ ಉತ್ಪಾದನೆ ಕುಂಠಿತಗೊಂಡಿತ್ತು. ಈ ವರ್ಷ ಕೂಡ ಸಕಾಲದಲ್ಲಿ ಮುಂಗಾರು ಮಳೆ ಬರಲಿಲ್ಲ. ಹೀಗಾಗಿ ರಾಗಿ ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಮತ್ತಷ್ಟು ಬೆಲೆ ಹೆಚ್ಚುವ ಸಾಧ್ಯತೆಯೂ ಇದೆ.
ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ವಾರ್ಷಿಕವಾಗಿ ಸುಮಾರು 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದು 26 ರಿಂದ 28 ಲಕ್ಷ ಟನ್ ರಾಗಿ ಉತ್ಪಾದಿಸಲಾಗುತ್ತಿದೆ. ರಾಗಿ ಉತ್ಪಾದನೆಯ ಮುಕ್ಕಾಲು ಪಾಲು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ. ಇನ್ನುಳಿದ ಕಾಲು ಭಾಗ, ಬಿಹಾರ, ಉತ್ತರ ಪ್ರದೇಶ, ಒಡಿಧಿಶಾ, ಮಧ್ಯ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶಗಳು ಪೂರೈಸುತ್ತವೆ.
ಕಳೆದ ವರ್ಷ ಕೆ.ಜಿ. ರಾಗಿ 45 ರೂ.ನಂತೆ ಮಾರಾಟ ಮಾಡಿದ್ದೆವು. ಈ ಬಾರಿ 55 ರೂ.ಗೆ ಏರಿಸಲಾಗಿದೆ. ನಮಗೂ ಮಾರುಕಟ್ಟೆಯಲ್ಲಿ ಗುಣಮಟ್ಟದ ರಾಗಿ ಸಿಗುತ್ತಿಲ್ಲ ಎನ್ನುತ್ತಾರೆ ರಘು ಪ್ರಾವಿಷನ್ಸ್ ಸ್ಟೋರ್ಸ್ನ ರಘುವೀರ್.
2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ಎಫ್‌ಎಕ್ಯು ಗುಣಮಟ್ಟದ ರಾಗಿ, ಭತ್ತ, ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 2300 ರೂ., ರಾಗಿ ಕ್ವಿಂಟಾಲ್‌ಗೆ 4290 ರೂ. ನಿಗದಿ ಮಾಡಲಾಗಿದೆ.
ಮಳೆ ಕೊರತೆಯ ನಡುವೆ ಅಲ್ಪಸ್ವಲ್ಪ ರಾಗಿ ಬೆಳೆದರೂ ರೈತರಿಗೆ ಲಾಭ ಇಲ್ಲ. ಏಕೆಂದರೆ ಈಗ ಕೂಲಿಕಾರರು ಸಿಗುವುದಿಲ್ಲ. ಇದಕ್ಕಾಗಿ ರಾಗಿ ಒಕ್ಕಣೆಗೆ ಯಂತ್ರಗಳು ಬಂದಿವೆ. ಒಕ್ಕಣೆ ಯಂತ್ರಗಳ ಬಾಡಿಗೆ ದರ ದುಬಾರಿಯಾಗಿದೆ. ಕಳೆದ ವರ್ಷ ರಾಗಿ ಒಕ್ಕಣೆ ಮಾಡಲು ಗಂಟೆಗೆ 2,500 ರೂ.
ಬಾಡಿಗೆ ಪಡೆಯುತ್ತಿದ್ದರು. ಈ ಬಾರಿ 3 ಸಾವಿರಕ್ಕೆ ಏರಿಕೆಯಾಗಿದೆ. ಜತೆಗೆ ಸಾಗಾಟದ ವೆಚ್ಚವೂ ದುಬಾರಿಯಾಗಿದೆ. ಹೀಗಾಗಿ, ರಾಗಿ ಬೆಲೆಯೂ ದುಬಾರಿಯಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ವಸಂತಕುಮಾರ್.