ಚಿಕ್ಕಬಳ್ಳಾಪುರ: ಅಕ್ಟೋಬರ್, ನವೆಂಬರ್ ಸೇರಿ ಚಿಕ್ಕಬಳ್ಳಾಪುರದಲ್ಲಿ ಹಿಂಗಾರು ಮಳೆ ಸಮೃದ್ಧಿಯಾಗಿ ಆಗಿದೆ. ದೀಪಾವಳಿವರೆಗೂ ಮಾತ್ರವಲ್ಲ, ದೀಪಾವಳಿ ನಂತರವೂ ಮಳೆ ಸುರಿಯುತ್ತಿದ್ದು, ಶೇ.100ರಷ್ಟು ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಕಳೆ ಬಂದಿದ್ದು, ಆಗಲೇ ರಾಗಿ ತೆನೆಗಳೊಂದಿಗೆ ಹೊಲಗಳಲ್ಲಿ ಕಂಗೊಳಿಸುತ್ತಿದೆ.ಇನ್ನು ರಾಗಿ ಮಾತ್ರವಲ್ಲ, ಬರದ ಛಾಯೆ ಎದುರಿಸುವ ಭೀತಿಯಲ್ಲಿದ್ದ ಹೈನುಗಾರಿಕೆಗೂ ಈಗ ಹಸಿರು ಮೇವು ಸಿಗುತ್ತಿರುವುದರಿಂದ ಕಳೆ ಬಂದಿದೆ.
ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಹಿಂಗಾರು ಮಳೆ ಮತ್ತೆ ರೈತರ ನಿರೀಕ್ಷೆಯನ್ನು ನಿಜ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹಿಂಗಾರು ಮಳೆ ರೈತರ ಕೈಹಿಡಿದಿದೆ.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸುರಿದ ಮಳೆಯಿಂದ ಇನ್ನೇನು ಕೈತಪ್ಪಿಹೋಯ್ತು ಎನ್ನುವಂತಿದ್ದ ರಾಗಿ ಬೆಳೆ ಬಹುತೇಕ ಕಡೆ ಉತ್ತಮ ಫಸಲಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಜಿಲ್ಲೆಯ ಹಲವು ತಾಲೂಕುಗಳಲ್ಲಿಮಳೆಯಿಲ್ಲದೆ ಬಾಡುತ್ತಿದ್ದ ರಾಗಿ ಬೆಳೆ ಈಗ ತೆನೆ ಬಿಟ್ಟು ನಿಂತಿದೆ.
ಕೆಲವೆಡೆ ಕೊಯ್ಲುಕೂಡಾ ಆಗುತ್ತಿದ್ದು, ಉತ್ತಮ ಫಸಲು ಕೈಗೆ ಸಿಗುವ ಭರವಸೆ ನೀಡಿದೆ. ಕೇವಲ ರಾಗಿ ಮಾತ್ರವಲ್ಲ, ದನಗಳಿಗೆ ಅವಶ್ಯವಿರುವ ಮೇವು ಕೂಡಾ ಸಿಗುತ್ತಿದ್ದು, ಬರದ ಭೀತಿಯಿಲ್ಲದೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಹಿಂಗಾರು ಮಳೆ ಸಮೃದ್ಧಿಯಾಗಿ ಆಗಿದೆ. ದೀಪಾವಳಿವರೆಗೂ ಮಾತ್ರವಲ್ಲ, ದೀಪಾವಳಿ ನಂತರವೂ ಮಳೆ ಸುರಿಯುತ್ತಿದ್ದು, ಶೇ.100ರಷ್ಟು ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಕಳೆ ಬಂದಿದ್ದು, ಆಗಲೇ ರಾಗಿ ತೆನೆಗಳೊಂದಿಗೆ ಹೊಲಗಳಲ್ಲಿ ಕಂಗೊಳಿಸುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿಂಗಾರು ಮಳೆ ಭರವಸೆ ಮೂಡಿಸಿದೆ. ಅದೇ ರೀತಿ ಈ ಬಾರಿಯೂ ಹಿಂಗಾರು ಕೊನೆಗೂ ಕೈ ಹಿಡಿದಿದೆ. 2023ರಲ್ಲಿ ತೀವ್ರ ಬರದಿಂದಾಗಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿತ್ತು. ರೈತರು ತಮ್ಮ ರಾಸುಗಳಿಗೆ ಮೇವು ಪೂರೈಸಲು ಪರದಾಡುವಂತಾಗಿತ್ತು.
ಈ ಬಾರಿ ಮುಂಗಾರು ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೈಕೊಟ್ಟ ಪರಿಣಾಮ ರೈತರು ಕಂಗಾಲಾಗಿದ್ದರು. ಆದರೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಸುರಿದಿರುವ ಮಳೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಜಿಲ್ಲೆಯಲ್ಲಿ ದೀಪಾವಳಿವರೆಗೂ ಮಳೆ ಬರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಜಡಿ ಮಳೆಯಾಗಿರುವ ನಿದರ್ಶನಗಳೂ ಇವೆ. ಹೀಗಾಗಿ ರೈತರಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಅದೇ ರೀತಿ ದೀಪಾವಳಿವರೆಗೂ ಮಾತ್ರವಲ್ಲ, ದೀಪಾವಳಿ ನಂತರವೂ ಮಳೆ ಸುರಿಯುತ್ತಿದೆ. ಹೀಗಾಗಿ ಹಿಂಗಾರು ಮಳೆ ಜಿಲ್ಲೆಯ ಜನರನ್ನು ಕೈಬಿಡಲ್ಲಎನ್ನುವ ನಂಬಿಕೆ ಮತ್ತೆ ಬಂದಿದೆ.
ಆಗಸ್ಟ್ -ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬದಲು ಪ್ರಖರ ಬಿಸಿಲು ಇದ್ದಿದ್ದರಿಂದ ಬೆಳೆಗಳೆಲ್ಲ ಸುಟ್ಟು ಕರಕಲಾಗಲು ಆರಂಭಿಸಿದ್ದವು. ಹೀಗಾಗಿ ಈ ಬಾರಿ ಮಳೆ ನಂಬಿ ಬಿತ್ತನೆ ಮಾಡಿರುವ ರೈತರಿಗೆ ದಿಕ್ಕು ತೋಚದಂತಾಗಿತ್ತು. ಆದರೆ ಆಕ್ಟೋಬರ್, ನವೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಒಣಗುತ್ತಿದ್ದ ರಾಗಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ.
ರಾಗಿ ಫಸಲು ಕೈಸೇರುವಷ್ಟು ಮಳೆ ಈಗಾಗಲೇ ಬಿದ್ದಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಕೆಲವೆಡೆ ಕೆರೆಗಳು ತುಂಬಿಕೊಂಡಿದ್ದು ಬೇಸಿಗೆ ನೀರಿನ ಸಮಸ್ಯೆಗೂ ಮುಕ್ತಿ ಹಾಡಿದೆ.
ಜಿಲ್ಲೆಯಲ್ಲಿಶೇ.95ರಷ್ಟು ಬಿತ್ತನೆ ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿಒಟ್ಟು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರಾಗಿ ಬಿತ್ತನೆಯಾಗಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ.
ಮಳೆ ಕೊರತೆಯಿಂದ ಫಸಲಿಗೆ ಸ್ವಲ್ಪ ತೊಂದರೆಯಾಗಬಹುದು ಎಂಬ ಆತಂಕವಿತ್ತು. ಆಕ್ಟೋಬರ್ ಮತ್ತು ನವೆಂಬರ್ 2ನೇ ವಾರದಲ್ಲಿ ಸುರಿದ ಮಳೆಯಿಂದ ಎಲ್ಲಆತಂಕ ದೂರವಾಗಿದೆ. ರಾಗಿ ಬೆಳೆಗೆ ಅಗತ್ಯವಾದಷ್ಟು ಮಳೆ ಸುರಿದಿದ್ದು, ಹೊಲಗಳು ಆಗಲೇ ಕಂಗೊಳಿಸಲು ಆರಂಭಿಸಿವೆ.
ಜಿಲ್ಲೆಯ ಬೆಟ್ಟದ ಸಾಲುಗಳಿರುವ ಕಡೆ ಒಳ್ಳೆಯ ಮಳೆಯಾಗಿದ್ದು, ಆಗಲೇ ರಾಗಿ ಕೊಯ್ಲಿಗೆ ಬಂದಿರುವುದರಿಂದ ಕೆಲವೆಡೆ ಸಣ್ಣ ಪುಟ್ಟ ಸಮಸ್ಯೆಯಾಗಿದೆ. ಅದುಬಿಟ್ಟರೆ ಬಹುಪಾಲು ರಾಗಿ ಬೆಳೆ ಮಳೆ ಅವಶ್ಯಕತೆ ಇತ್ತು. ಆ ಅಗತ್ಯವನ್ನು ನವೆಂಬರ್‌ನಲ್ಲಿ ಸುರಿದ ಮಳೆ ನೀಗಿಸಿದೆ. ಮುಂದಿನ ಬಿತ್ತನೆಗಳಿಗಿಂತಲೂ ಹಿಂದಿನ ಬಿತ್ತನೆಗಳಿಂದ ರೈತರು ಫಸಲು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಿಂಗಾರು ಮಳೆಯಿಂದಾಗಿ ನಾವು ಉಸಿರಾಡುವಂತಾಗಿದೆ. ಅಕ್ಟೋಬರ್ ಮತ್ತು ನವೆಂಬರ್‌ಗಳಲ್ಲಿಬಿದ್ದ ಮಳೆಯಿಂದ ರಾಗಿ ಹೊಲಗಳು ಭರವಸೆ ಮೂಡಿಸಿವೆ. ಹಿಂದಿನ ಬಿತ್ತನೆ ಮಾಡಿರುವವರಿಗೆ ಪೂರ್ಣ ಫಸಲು ಸಿಗಲಿದೆ. ರಾಗಿ ಮಾತ್ರವಲ್ಲ, ದನಗಳಿಗೆ ಅನಿವಾರ್ಯವಾಗಿದ್ದ ಮೇವು ಕೂಡಾ ಸಿಕ್ಕಿದ್ದು ಖುಷಿಯಾಗಿದೆ ಎಂದು ರಾಮಕೃಷ್ಣಪ್ಪ, ರೈತ ಹೇಳಿದ್ದಾರೆ.
ಈಗ ಬಿದ್ದಿರುವ ಮಳೆಯಿಂದ ರಾಗಿ ಬೆಳೆಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಕೆಲವೆಡೆ ಕೊಯ್ಲು ಮಾಡಿರುವ ರಾಗಿ ಬೆಳೆಗೆ ಅನಾನುಕೂಲವಾಗಲಿದೆ. ಅದು ಬಿಟ್ಟರೆ ಹಿಂದಿನ ಬಿತ್ತನೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಮಳೆ ಕೊರತೆಯಾಗಿದ್ದರೆ ರಾಗಿ ಕಾಳು ಕಟ್ಟಲು ತೊಂದರೆಯಾಗುತ್ತಿತ್ತು.
ಹಿಂಗಾರು ಮಳೆ ಬಿದ್ದಿರುವುದು ಅನುಕೂಲ. ಆದರೆ ಆರಂಭದಲ್ಲೇ ಬಿತ್ತನೆ ಮಾಡಿದ್ದ ರಾಗಿ ಬೆಳೆಗೆ ಸ್ವಲ್ಪ ತೊಂದರೆಯಾಗಲಿದೆ ಎಂದು ಮುನಿರಾಜು, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಇವರು ಹೇಳಿದ್ದಾರೆ.