ಕಲಬುರಗಿ: ಎಲ್ಲೆಡೆ ಹಬ್ಬದ ಖುಷಿ ಇರುವಾಗ ಸದ್ದಿಲ್ಲದೆ ಅಡುಗೆ ಎಣ್ಣೆ ಬೆಲೆ ದಿಢೀರ್ ಏರಿಕೆ ಕಂಡಿರುವುದು ಶ್ರೀಸಾಮಾನ್ಯರ ಹಬ್ಬದ ಬಜೆಟ್ ಏರುಪೇರಾಗುವಂತೆ ಮಾಡುತ್ತಿದೆ. ತಾಳೆ (ಪಾಮ್) ಎಣ್ಣೆ ಬೆಲೆ ಲೀಟರ್‌ಗೆ 130-135 ರೂ. ಆಸುಪಾಸು ಏರಿಕೆ ಕಂಡಿದ್ದು, ಒಂದು ತಿಂಗಳ ಅಂತರದಲ್ಲಿ ಸುಮಾರು ಶೇ 40ರಷ್ಟು ಹೆಚ್ಚಳ ಆಗಿದೆ.
ಸೂರ್ಯಕಾಂತಿ ಎಣ್ಣೆ ಬೆಲೆ ಪ್ರತಿ ಲೀಟರ್‌ಗೆ ಸೆ. 10ರವರೆಗೆ 110ರಿಂದ 115 ರೂ. ಇತ್ತು. ಈಗ ಬ್ರ್ಯಾಂಡೆಡ್ ಎಣ್ಣೆ ಬೆಲೆ 140-150 ರೂ. ಮುಟ್ಟಿದೆ.ಕಳೆದ ತಿಂಗಳು ಕೇಂದ್ರ ಸರಕಾರ ತಾಳೆ ಹಾಗೂ ಸೂರ್ಯಕಾಂತಿ ಎಣ್ಣೆ ಆಮದು ಮೇಲೆ ಸುಂಕ ಹೆಚ್ಚಳ ಮಾಡಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಶೇ. 20ರಷ್ಟು ದರ ಹೆಚ್ಚಳ ಕಂಡಿದೆ. ಹಬ್ಬದ ಸೀಸನ್ ಆಗಿದ್ದರಿಂದ ಇನ್ನುಳಿದ ಶೇ. 20ರಷ್ಟು ಬೆಲೆ ಹೆಚ್ಚಳ ಕಂಡಿದೆ ಎಂದು ಎಣ್ಣೆ ವ್ಯಾಪಾರಿಗಳು ಹೇಳಿದ್ದಾರೆ.
ತಾಳೆಎಣ್ಣೆ ದೇಶದಲ್ಲಿ ಉತ್ಪಾದನೆಗಿಂತ ಆಮದಿನ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಇದರಿಂದ ಸುಂಕ ಹೆಚ್ಚಳ ನೇರವಾಗಿ ಪ್ರಭಾವ ಬೀರಿದೆ. ಪ್ರತಿ ಬಾರಿ ಹಬ್ಬದ ವೇಳೆ ಹೆಚ್ಚಳ ಮುಖ್ಯವಾಗಿ ನವರಾತ್ರಿ ವೇಳೆ ಉತ್ತರ ಕರ್ನಾಟಕದಲ್ಲಿ ಎಣ್ಣೆ ಬಳಕೆ ಹೆಚ್ಚು. ಪ್ರತಿ ಮನೆಯಲ್ಲೂ 9 ದಿನ ಘಟ ಸ್ಥಾಪನೆ ಮಾಡಲಾಗುತ್ತದೆ. ಈ ವೇಳೆ ನಿರಂತರ ಜ್ಯೋತಿ ಪ್ರಜ್ವಲನೆ ಮಾಡಲಾಗುತ್ತದೆ. ಇದರಿಂದ ಪ್ರತಿ ಬಾರಿ ಹಬ್ಬದ ವೇಳೆ ಬೆಲೆ ತುಸು ಹೆಚ್ಚಳ ಕಾಣುತ್ತಿತ್ತು. ಆದರೆ, ಈ ಬಾರಿ ಕೇಂದ್ರದ ಆಮದು ಸುಂಕ ಹೆಚ್ಚಳ ಹಿನ್ನೆಲೆಯಲ್ಲಿ ಶೇ. 40 ರಷ್ಟು ದರ ಹೆಚ್ಚಳ ಕಂಡಿದೆ.
ದೇಶದಲ್ಲಿ ಎರಡು ತಿಂಗಳು ಆಗುವಷ್ಟು ಅಡುಗೆ ಎಣ್ಣೆ ದಾಸ್ತಾನು ಇರುವ ಕಾರಣ ಬೆಲೆ ಏರಿಕೆ ಮಾಡದಂತೆ ಕೇಂದ್ರ ಸರಕಾರ ಸೂಚಿಸಿತ್ತು. ಇದನ್ನು ಲೆಕ್ಕಿಸಿದ ವರ್ತಕರು ಆಮದು ಸುಂಕ ಏರಿಕೆ ಆಗುತ್ತಿದ್ದಂತೆ ಬೆಲೆ ಹೆಚ್ಚಳ ಮಾಡಿದ್ದಾರೆ. ತಾಳೆ ಎಣ್ಣೆ ಬೆಲೆ ಇನ್ನೂ ಹೆಚ್ಚಳ ಆಗಬಹುದೆಂದು ಸಗಟು ವ್ಯಾಪಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಸಾರ್ವಜನಿಕರಿಗೆ ಅಡುಗೆ ಎಣ್ಣೆ ದರ ಜೇಬು ಭಾರ ಆಗುವಂತೆ ಮಾಡಿದೆ” ಎಂದು ಕಲಬುರಗಿಯ ಚಿಲ್ಲರೆ ವ್ಯಾಪಾರಿ ನಾಗರಾಜ ಜಿ ತಿಳಿಸಿದ್ದಾರೆ.