ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಯಿಂದ ಅಂಧ ಸಾಹಿತಿಗಳು ಆಗಮಿಸಿದ್ದು, ಅವರೆಲ್ಲರಿಗೂ ಸರ್ವಾಧ್ಯಕ್ಷರ ಭಾಷಣದ ಪ್ರತಿಯನ್ನು ಬ್ರೈಲ್ ಲಿಪಿಯಯಲ್ಲಿ ನೀಡಲಾಯಿತು. ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ಶನಿವಾರ ವಿಜಯಪುರದಲ್ಲಿ ನಡೆಯಿತು. ಬೆಂಗಳೂರಿನ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್, ವಿಜಯಪುರದ ಶ್ರೀ ಗಾನಯೋಗಿ ಪಂಚಾಕ್ಷರಿ ಪ್ರತಿಷ್ಠಾನ ಹಾಗೂ ಸಮರ್ಥನಂ, ದೀಪಾ ಸಂಸ್ಥೆ ಸಹಯೋಗದಲ್ಲಿಆಯೋಜಿಸಿದ್ದ ಸಾಹಿತ್ಯ ಸಮ್ಮೇಳನವನ್ನು ಬಸವಾನಂದ ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಡಾ. ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವರು ಉದ್ಘಾಟಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಬಸವಾನಂದ ಶ್ರೀಗಳು ಮಾತನಾಡಿ, “ಭಾರತೀಯ ಭಾಷೆಗಳ ಪೈಕಿ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಮೇಲ್ಪಂಕ್ತಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈವರೆಗೆ ಅಂಧರ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಬಸವ ನಾಡು ವಿಜಯಪುರದಲ್ಲಿ ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ ನಡೆದಿದ್ದು ವಿಶೇಷವಾಗಿದೆ. ಅಂಧರನ್ನು ವಿಕಲಚೇತನರು, ಅಂಗವಿಕಲರೆಂದು ಕರೆಯಬೇಡಿ, ಅಂಧರು ಎಂದು ಕರೆಯಿರಿ. ಬ್ರೈಲ್ ತಂತ್ರಾಂಶದ ಮೂಲಕ ಅಂಧರು ಸಾಹಿತ್ಯ ಸೇರಿದಂತೆ ಬರವಣಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ. ಅಂಧರಿಗಾಗಿ ಶಾಲೆಗಳನ್ನು ತೆರೆದು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಬಸವಾನಂದ ಸ್ವಾಮೀಜಿಯವರ ಭಾಷಣದ ಪ್ರತಿಗಳನ್ನು ಅಂಧರಿಗೆ ಬ್ರೈಲ್ ಲಿಪಿಯಲ್ಲಿ ನೀಡಿದರು. ಬೆರಳು ತುದಿಯ ಮೂಲಕ ಭಾಷಣ ಓದುತ್ತಿರುವುದು ಕಂಡು ಬಂತು.
ಸಮ್ಮೇಳನದ ಮೂಲಕ ಸರ್ಕಾರಕ್ಕೆ ಅಂಧರ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಅಂಧ ಸಾಹಿತಿಗಳು ಆಗಮಿಸಿದ್ದು, ಉದ್ಘಾಟನೆ ಕಾರ್ಯಕ್ರಮದ ಬಳಿಕ ನಡೆದ ಎರಡು ಗೋಷ್ಠಿಯಲ್ಲಿ ಕವನ, ಕಥೆ, ಭಾಷಾ ಸಾಹಿತ್ಯದ ಬಗ್ಗೆ ವಾಚನ ಮಾಡಿದರು