ಮುಂಬೈ: ಮೇರೆ ಬೂತ್ ಸಬ್ಸೆ ಮಜಬೂತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಕರು ಮತ್ತು ರೈತರೊಂದಿಗೆ ಬೂತ್ ಮಟ್ಟದಲ್ಲಿ ಸಂವಾದ ನಡೆಸಿದರು.
ಮಹಾರಾಷ್ಟ್ರ ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇದ್ದು, ಚುನಾವಣಾ ಪ್ರಚಾರ ಜೋರಾಗಿದೆ. ಇಂದು ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುಯಲ್ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಪ್ರತಿ ಮತಗಟ್ಟೆಗಳಲ್ಲಿ ಗೆಲ್ಲುವಲ್ಲಿ ತಮ್ಮ ಶಕ್ತಿಯನ್ನು ಕೇಂದ್ರೀಕರಿಸುವಂತೆ ಕರೆ ನೀಡಿದರು.
‘ಮೇರೆ ಬೂತ್ ಸಬ್ಸೆ ಮಜಬೂತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಕರು ಮತ್ತು ರೈತರೊಂದಿಗೆ ಬೂತ್ ಮಟ್ಟದಲ್ಲಿ ಸಂವಾದ ನಡೆಸಿದರು. ಈ ವೇಳೆ ಬಿಜೆಪಿ ನೇತೃತ್ವದ ಸರ್ಕಾರದ ಯೋಜನೆಗಳ ವಿಡಿಯೋವನ್ನು ಹಂಚುವಂತೆ ಸಲಹೆ ನೀಡಿದರು.
ಇದೇ ವೇಳೆ ಪಕ್ಷದ ಸಂದೇಶ ಪ್ರಚಾರ ಮಾಡಲು ವೈದ್ಯರಂತಹ ವೃತ್ತಿಪರರನ್ನು ಕೂಡ ಬೂತ್ ಕಾರ್ಯಕರ್ತರಾಗಿ ಬಳಕೆ ಮಾಡುವಂತೆ ತಿಳಿಸಿದರು.
ಇದೇ ವೇಳೆ ವಿಪಕ್ಷ ಮಹಾ ವಿಕಾಸ ಅಗಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಂವಿಎ ಮಹಾರಾಷ್ಟ್ರದಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದೆ.
ಕಾರ್ಯಕರ್ತರು ಮತದಾರರಿಗೆ ನಿಜಾಂಶವನ್ನು ತಿಳಿಸಬೇಕು. ನಾನು ಯಾವುದೇ ಕಡೆ ಹೋದಾಗಲೂ ನಮ್ಮ ಕಾರ್ಯಕರ್ತರ ಕಠಿಣ ಶ್ರಮ ನೋಡುತ್ತೇನೆ.
ನೀವೆಲ್ಲರೂ ಬಿಜೆಪಿಯ ಬಲಿಷ್ಠ ಸೈನಿಕರು, ಮೋದಿಯ ನೇರ ಪ್ರತಿನಿಧಿಗಳು. ಜನರು ನಿಮಗೆ ಅವರ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೇಳುತ್ತಾರೆ. ಈ ಮೂಲಕ ಧೈರ್ಯ ಹೊಂದುತ್ತಾರೆ. ನಿಮಗೆ ಹೇಳಿದರೆ ಅದು ಮೋದಿ ಹೇಳಿದಂತೆ. ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಹೊಂದುವ ಮೂಲಕ ಎಲ್ಲರ ಪ್ರಗತಿಗೆ ಅವಕಾಶ ಸಿಗುತ್ತದೆ ಎಂದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವನ್ನು ಜಯಭೇರಿ ಬಾರಿಸುವಂತೆ ಬಿಜೆಪಿ ಬೂತ್ ಕಾರ್ಯಕರ್ತರು ಪ್ರತಿ ಮನೆಗೆ ಸಂದೇಶವನ್ನು ತಲುಪಿಸಬೇಕು. ಮಂದಿನ ಐದು ವರ್ಷ ಕೂಡ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಇರಬೇಕು ಎಂದು ರಾಜ್ಯದ ಜನ ಬಯಸುತ್ತಿದ್ದಾರೆ.
ಮಹಾಯುತಿ ಸರ್ಕಾರ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣ ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ಸರ್ಕಾರ ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರದ ನಡುವಿನ ವ್ಯತ್ಯಾಸ ಇದೆ. ಜನರು ಈ ವ್ಯತ್ಯಾಸವನ್ನು ಅರಿತಿದ್ದಾರೆ. ಮಹಾಯುತಿ ಸರ್ಕಾರದ ಬಗ್ಗೆ ಮಹಾರಾಷ್ಟ್ರ ಜನರಿಗೆ ಮೆಚ್ಚುಗೆ ಇದೆ. ನಾನು ಎಲ್ಲಿಯೇ ಹೋದರೂ ಈ ಪ್ರೀತಿ ಕಾಣುತ್ತೇನೆ ಎಂದು ಪ್ರಧಾನಿ ಹೇಳಿದರು.
ಒಟ್ಟಾಗಿದ್ದರೆ ಸುರಕ್ಷಿತ ಎಂಬುದನ್ನು ಜನರು ಅಳವಡಿಸಿಕೊಂಡಿದ್ದಾರೆ. ಇದು ಜನರ ಮನಸ್ಸಿನಲ್ಲಿಯೂ ಇತ್ತು. ಇದಕ್ಕೆ ನಾನು ನನ್ನ ಧ್ವನಿಯನ್ನು ಮಾತ್ರ ನೀಡಿದೆ ಎಂದು ಮೋದಿ ತಿಳಿಸಿದರು.