ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ಯುವಕರು ಹಾಗೂ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಪುತ್ರ, ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಹಾಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ.
ತಾಲ್ಲೂಕಿನ ವರುಣದ ಅಂಬೇಡ್ಕರ್ ಭವನದಲ್ಲಿ ನಾಲ್ಕು ತಿಂಗಳವರೆಗೆ ತರಬೇತಿ ನೀಡಲಾಗುವುದು. ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವ ಆಕಾಂಕ್ಷಿಗಳಿಗ, ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಾರೆ.
ನ.11ರಿಂದ ನೋಂದಣಿ ಪ್ರಾರಂಭ ಗೊಳ್ಳಲಿದೆ. ನ.25ರೊಳಗೆ ಹೆಸರು ನೋಂದಾಯಿಸಿದವರಿಗೆ ಅವಕಾಶ ದೊರೆಯಲಿದೆ. ಕೆಪಿಎಸ್‌ಸಿಯಿಂದ ನಡೆಸುವ ಕೆಎಎಸ್ ಮೊದಲಾದ ಪರೀಕ್ಷೆಗಳಿಗೆ, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಪಿಡಿಒ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಗಳನ್ನು ಪಡೆಯಲು ಬಯಸುವವರು ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೇಕಾಗುವ ಸಿದ್ಧತೆಯ ಕುರಿತು ಮಾರ್ಗದರ್ಶನವನ್ನು ಪಡೆಯಬಹುದಾಗಿದೆ.
ಪದವೀಧರರು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು ಹಾಗೂ ಪಿಯುಸಿ ಪಾಸಾದವರು ಭಾಗವಹಿಸಬಹುದು.
ದೂರದ ಊರಿಗೆ ಹೋಗುವುದು ತಪ್ಪುತ್ತದೆ: ಉದ್ಯೋಗ ಆಕಾಂಕ್ಷಿಯು ಪರೀಕ್ಷೆಯ ತರಬೇತಿಗೆಂದು ಬೆಂಗಳೂರು ಅಥವಾ ಧಾರವಾಡಕ್ಕೆ ಹೋಗಬೇಕಾದರೆ ₹50ಸಾವಿರದಿಂದ ₹60 ಸಾವಿರ ಬೇಕಾಗುತ್ತದೆ.
ಸಮೀಪದಲ್ಲೇ ತರಬೇತಿ ದೊರೆತರೆ ಆ ಹಣ ಉಳಿಯಲಿದೆ. ಹೀಗಾಗಿ, ಇನ್ಮುಂದೆ ವರುಣ ಕ್ಷೇತ್ರದಲ್ಲೇ ಪ್ರತಿ ವರ್ಷ ತರಬೇತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ವರುಣ, ದಂಡಿಕೆರೆ, ಸಿದ್ದರಾಮನ ಹುಂಡಿ, ಯಡಕೊಳ, ಕುಪ್ಪೇಗಾಲ, ಹೊಸಹಳ್ಳಿ, ರಂಗನಾಥಪುರ, ಶ್ರೀನಿವಾಸಪುರ, ದೇವೇಗೌಡ ಹುಂಡಿ, ತುಮ್ಮನೇರಳೆ, ನಂದಿಗುಂದಿ, ಮರಡಿಹುಂಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಪದವೀಧರರಿಗೆ ಅನುಕೂಲವಾಗಲಿದೆ.
ಗ್ರಾಮೀಣ ಪ್ರದೇಶದ ಯುವಜನರು ಸರ್ಕಾರಿ ನೌಕರಿ ಪಡೆದುಕೊಳ್ಳಲು ಎದುರಿಸಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಸೂಕ್ತ ತರಬೇತಿಯ ಅಗತ್ಯವಿರುತ್ತದೆ.
ನಗರ ಪ್ರದೇಶಗಳಿಗೆ ಅಥವಾ ಬೆಂಗಳೂರು, ಧಾರವಾಡದಂತಹ ಕಡೆಗಳಿಗೆ ಹೋಗುವುದು ಆರ್ಥಿಕವಾಗಿ ಹೊರೆಯಾಗುತ್ತದೆ. ಹಣವನ್ನು ಹೊಂದಿಸುವುದು ಅವರಿಗೆ ಕಷ್ಟವಾಗುತ್ತದೆ. ಇದಕ್ಕಾಗಿ ಅವರಿಗೆ ಸಮೀಪದಲ್ಲೇ ತರಬೇತಿ ದೊರೆಯಲೆಂದು, ಕ್ಷೇತ್ರದಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಯತೀಂದ್ರ ತಿಳಿಸಿದ್ದಾರೆ.
ನ.11ರಿಂದ ನೋಂದಣಿ 25ರವರೆಗೆ ಹೆಸರು ನೋಂದಾಯಿಸಬಹುದು ಪದವೀಧರರು, ಪದವಿ ವಿದ್ಯಾರ್ಥಿಗಳಿಗೆ ಅವಕಾಶದಂಡಿಕೆರೆ ನಾಗರಾಜ್ ಸಿಂಡಿಕೇಟ್ ಸದಸ್ಯ ಬೆಂಗಳೂರು ವಿಶ್ವವಿದ್ಯಾಲಯಇಂತಹ ತರಬೇತಿಯಿಂದ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಹೊಂದಬೇಕು ಎನ್ನುವವ ರಿಗೆ ಅನುಕೂಲವಾಗಲಿದೆ.
ಕೋಚಿಂಗ್ ಕೇಂದ್ರಗಳಿಗೆ ಹೋಗಲಾರದ ಬಡವರಿಗೆ ಸಹಕಾರಿ ಆಗುತ್ತದೆ. ನೋಂದಣಿಗೆ ಮೊ.ಸಂ. 88670 71733 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.