Free education: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಅಂಗ ಪಕ್ಷದವಾದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಪುರುಷ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವುದಾಗಿ ಭರವಸೆ ನೀಡಿದೆ.
ಜತೆಗೆ ದಿನ ಬಳಕೆ ವಸ್ತುಗಳ ಬೆಲೆಯನ್ನು ಸ್ಥಿರೀಕರಣಗೊಳಿಸಲಾಗುವುದು ಹಾಗೂ ಧಾರಾವಿ ಕೊಳಗೇರಿ ಮರು ಅಭಿವೃದ್ಧಿ ಯೋಜನೆಯನ್ನು ಕೈ ಬಿಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಸರ್ಕಾದಿಂದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ. ಅದೇ ರೀತಿ ಬಾಲಕರಿಗೂ ಉಚಿತ ಶಿಕ್ಷಣ ಒದಗಿಸಲು ಉದ್ದೇಶಿಸಿದ್ದೇವೆ ಎಂದು ಠಾಕ್ರೆ ತಿಳಿಸಿದ್ದಾರೆ.
ಜತೆಗೆ ಬಹುತೇಕ ಎಲ್ಲ ಚುನಾವಣಾ ಭರವಸೆಗಳು ಮಹಾ ವಿಕಾಸ ಅಘಾಡಿ ಪ್ರಣಾಳಿಕೆಯಲ್ಲೇ ಬರಲಿವೆ. ಆದರೆ ಕೆಲವ ವಿಷಯಗಳಲ್ಲಿ ನಾವು ವಿಶೇಷ ಗಮನ ಹರಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಎಂವಿಎ ಅಧಿಕಾರಕ್ಕೆ ಬಂದರೆ ರಾಜ್ಯದ ವಿದ್ಯಾರ್ಥಿನಿಯರು ಸರ್ಕಾರಿ ನೀತಿಯಡಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ರೀತಿಯಲ್ಲೇ ಪುರುಷ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಠಾಕ್ರೆ ಭರವಸೆ ನೀಡಿದರು.
ಎಂವಿಎ ಅಗತ್ಯ ವಸ್ತುಗಳ ಬೆಲೆಯನ್ನು ಸ್ಥಿರವಾಗಿರಿಸುತ್ತದೆ ಎಂದು ಅವರು ಹೇಳಿದರು.
ಧಾರಾವಿ ಪುನರಾಭಿವೃದ್ಧಿ ಯೋಜನೆಗೆಯು ಮುಂಬೈ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ರದ್ದುಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ನಗರ, ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ “ಮಣ್ಣಿನ ಮಕ್ಕಳಿಗಾಗಿ” ಕೈಗೆಟುಕುವ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಬುಧವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಹಾ ವಿಕಾಸ ಆಘಾಡಿ ಬೃಹತ್ ಸಮಾವೇಶ ನಡೆಸಿತು. ಈ ವೇಳೆ ಎಂವಿಎ ಮಿತ್ರ ಪಕ್ಷದ ನಾಯಕರು ಕೂಡ ಉಪಸ್ಥಿತರಿದ್ದರು. ಸಮಾವೇಶದಲ್ಲಿ ಮಹಾರಾಷ್ಟ್ರ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಿಸಲಾಯಿತು.
ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಎಲ್ಲಾ ಬಡ ಮಹಿಳೆಯರಿಗೆ ಮಾಸಿಕ 3,000 ರೂ ನೀಡುವುದು, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಬಸ್ ಪ್ರಯಾಣ, ರೈತರ 3 ಲಕ್ಷದವರೆಗಿನ ಸಾಲ ಮನ್ನಾ, ನಿಯಮಿತವಾಗಿ ತಮ್ಮ ಬಾಕಿ ಮರುಪಾವತಿ ಮಾಡುವವರಿಗೆ 50,000 ರೂ.ಯಿಂದ 25 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧಗಳು, ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಮತ್ತು ಜಾತಿ ಗಣತಿ ಮತ್ತು ಕೋಟಾಗಳ ಮೇಲಿನ ಶೇ 50ರಷ್ಟ ತಡೆ ಮೀಸಲಾತಿ ತೆಗೆದು ಹಾಕುವುದು ಎಂದು ಎಂವಿಎ ಘೋಷಣೆ ಮಾಡಿದೆ.