ಬ್ರೆಜಿಲ್ : ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂದು ಬ್ರೆಜಿಲ್ಗೆ ಬಂದಿಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವು ಜಾಗತಿಕ ನಾಯಕರು ಶೃಂಗದಲ್ಲಿ ಭಾಗಿಯಾಗಲಿದ್ದಾರೆ.
ಮೂರು ದೇಶಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 19ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದರು. ಇಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಾಗತಿಕ ನಾಯಕರು ಭಾಗವಹಿಸಲಿದ್ದಾರೆ.
ನೈಜೀರಿಯಾದ ಮೊದಲ ಭೇಟಿಯ ಬಳಿಕ ಮೋದಿ ಬ್ರೇಜಿಲ್ಗೆ ಆಗಮಿಸಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದು, “ಜಿ20 ಶೃಂಗಸಭೆಗಾಗಿ ಬ್ರೇಜಿಲ್ನ ರಿಯೋ ಡಿ ಜನೈರೊ ನಗರಕ್ಕೆ ಬಂದಿಳಿದಿದ್ದೇನೆ. ಜಾಗತಿಕ ನಾಯಕರ ಜೊತೆಗಿನ ಫಲಪ್ರದ ಮಾತುಕತೆ ಮತ್ತು ಚರ್ಚೆಗಾಗಿ ಎದುರು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಜಿ20 ಶೃಂಗಸಭೆಯ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ನಗರ ರಿಯೊ ಡಿ ಜನೈರೊಗೆ ಬಂದಿದ್ದಾರೆ” ಎಂದು ಬ್ರೇಜಿಲ್ನಲ್ಲಿ ಸ್ವಾಗತ ಕೋರುವ ಫೋಟೋವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ.
ಬ್ರೆಜಿಲ್ ಈ ಬಾರಿ ಭಾರತದ ಪರಂಪರೆಯನ್ನು ಸೃಷ್ಟಿಸಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ನಮ್ಮ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿ20 ಶೃಂಗಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ಮಾಡಲು ಕಾಯುತ್ತಿದ್ದೇನೆ. ಜಾಗತಿಕ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶವನ್ನು ಕೂಡ ಇದೇ ವೇಳೆ ಬಳಸಿಕೊಳ್ಳುತ್ತೇನೆ” ಎಂದು ವಿದೇಶ ಪ್ರವಾಸಕ್ಕೂ ಮುನ್ನ ಮೋದಿ ಪೋಸ್ಟ್ ಮಾಡಿದ್ದರು.
ಮೂರು ದೇಶಗಳ ಪ್ರವಾಸದಲ್ಲಿರುವ ಮೋದಿ, ಈಗಾಗಲೇ ನೈಜೀರಿಯಾ ಭೇಟಿಯನ್ನು ಫಲಪ್ರದವಾಗಿ ಮುಗಿಸಿ, ಬ್ರೇಜಿಲ್ಗೆ ತೆರಳಿದ್ದಾರೆ. ಜಿ20 ಶೃಂಗಸಭೆ ಬಳಿಕ ನ.19 ಮತ್ತು 21ರಂದು ಗಯಾನಾ ದೇಶದ ಪ್ರವಾಸ ಕೈಗೊಳ್ಳುವರು. ಗಯಾನಾ ಅಧ್ಯಕ್ಷ ಮೊಹ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ 50 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಭಾನುವಾರ ನೈಜೀರಿಯಾ ರಾಜಧಾನಿ ಅಬುಜಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಅಲ್ಲಿನ ಅಧ್ಯಕ್ಷ ಬೋಲಾ ಅಹ್ಮದ್ ತಿನುಬು ಜೊತೆ ದ್ವಿಪಕ್ಷೀಯ ಮಾತುಕತೆ ಮತ್ತು ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದ್ದರು. ಇದೇ ವೇಳೆ ಮೋದಿ ಅವರಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (GCON) ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಶೇಷವೆಂದ್ರೆ, ಈ ಗೌರವ ಪಡೆದ ಎರಡನೇ ವಿದೇಶಿ ಅತಿಥಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now