ಶಿವಮೊಗ್ಗ:ಶಿವಮೊಗ್ಗದ ಜೋಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಕೋಟಿ ಕೋಟಿ ಅನುದಾನದಲ್ಲಿ ವಿವಿಧ ರೀತಿಯ ಕಾಮಗಾರಿ ನಡೆಯುತ್ತಿದೆ. ಜನರ ಆಕರ್ಷಣೆಯ ಕೇಂದ್ರವಾಗಿ ಜೋಗ ಅಭಿವೃದ್ದಿ ಮಾಡುವುದೇ ನಮ್ಮ ಉದ್ದೇಶ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
“ಜನರ ಆಕರ್ಷಣೆಯ ಕೇಂದ್ರವಾಗಿ ಜೋಗವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಜನ ಜೋಗಕ್ಕೆ ಬಂದ್ರೆ ಎಂಜಾಯ್ ಮಾಡಿಕೊಂಡು ಹೋಗುವಂತಹ ಸೌಕರ್ಯವನ್ನು ಜೋಗದಲ್ಲಿ ಮಾಡಲಾಗುವುದು” ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿ ಗ್ಲಾಸ್ ಹೌಸ್, ರೈನ್ ಡ್ಯಾನ್ಸ್ ಹಾಗೂ ವಂಡರ್ ಲಾ ರೀತಿ ಪ್ರವಾಸಿಗರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಹಾಗೇ ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರು ಜೋಗವನ್ನು ಕಣ್ಣು ತುಂಬಿಕೊಳ್ಳಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. 185 ಕೋಟಿ ರೂಪಾಯಿಯಲ್ಲಿ ಕಾಮಗಾರಿ ನಡೆಸಲಾಗುವುದು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಪ್ರವಾಸಿಗರು ನಿರಂತರವಾಗಿ ಜೋಗ ಜಲಪಾತವನ್ನು ವೀಕ್ಷಣೆ ಮಾಡಲು ಬರಬೇಕು ಎಂಬ ಉದ್ದೇಶ ನಮ್ಮದಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕೆಂದು ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಜೋಗದಲ್ಲಿನ ಅಭಿವೃದ್ಧಿ ಕಾರ್ಯದ ಕುರಿತು ಮಾಹಿತಿ ನೀಡಿದ ಅವರು, “ಜೋಗದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 183 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆಕರ್ಷಣೆಗೊಳ್ಳುವ ರೀತಿಯಲ್ಲಿ ಕಾಮಗಾರಿ ಮಾಡಲಾಗುತ್ತಿದೆ”.
ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷರು ಸೇರಿ ಇತರರಿದ್ದರು.