ಬೆಂಗಳೂರು: ಆರೋಗ್ಯ ನಮ್ಮೆಲ್ಲರ ಮೊದಲ ಪ್ರಾಶಸ್ತ್ಯವಾಗಬೇಕು. ಎಷ್ಟೇ ಕೆಲಸವಿದ್ದರೂ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ದಿನದಲ್ಲಿ ಒಂದಿಷ್ಟು ಕಾಲ ತೆಗೆದಿಡುವ ಅವಶ್ಯಕತೆ ಇದೆ.
ದೇಶದಲ್ಲಿಯೇ ಮೊದಲ ಆರೋಗ್ಯ ನಗರವನ್ನಾಗಿ ಬೆಂಗಳೂರನ್ನು ಪರಿವರ್ತಿಸುವ ಆರೋಗ್ಯ ಸಿಟಿ ದೃಷ್ಠಿಕೋನವನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಹೇಳಿದರು.
ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆರೋಗ್ಯ ವಲ್ಡ್, ರೋಟರಿ ಮತತು ಬಿ-ಪ್ಯಾಕ್ ಸಹಯೋಗದಲ್ಲಿ ನಡೆದ ಆರೋಗ್ಯ ಸಿಟಿ ಸಮ್ಮಿಟ್-2024 ಉದ್ಘಾಟಿಸಿ ಸಚಿವರು ಮಾತನಾಡಿದರು.
ಸಕಾರದಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಕೇವಲ ಸರ್ಕಾರದಿಂದ ಇಂಥ ಕೆಲಸಗಳು ಸಾಧ್ಯವಿಲ್ಲ, ನಮ್ಮೊಂದಿಗೆ ಎನ್‍ಜಿಒಗಳು ಕೈ ಜೋಡಿಸಿದಾಗ ಮಾತ್ರ ಎಲ್ಲೆಡೆ ಉತ್ತಮ ಆರೋಗ್ಯ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಆರೋಗ್ಯ ನಮ್ಮೆಲ್ಲರ ಮೊದಲ ಪ್ರಾಶಸ್ತ್ಯವಾಗಬೇಕು. ಆದರೆ, ಇಂದು ಒಬೆಸಿಟಿ, ಡಯಾಬಿಟಿಸ್, ಬಿಪಿ, ಒತ್ತಡ ಹೀಗೆ ಅನೇಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಎಷ್ಟೇ ಕೆಲಸವಿದ್ದರೂ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ದಿನದಲ್ಲಿ ಒಂದಿಷ್ಟು ಕಾಲ ತೆಗೆದಿಡುವ ಅವಶ್ಯಕತೆ ಇದೆ. ನಮ್ಮ ನಗರವನ್ನು ಆರೋಗ್ಯ ಸಿಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಪ್ರತಿಜ್ಞೆಯ ಆಂದೋಲನ ಪ್ರಶಂಸನೀಯ, ಇದಕ್ಕೆ ನಮ್ಮ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ ಸುದರ್ಶನ್ ಬಲ್ಲಾಳ್ ಣಾತನಾಡಿ, ಆರೋಗ್ಯ ಸಿಟಿ ನಿರ್ಮಾಣ ಮಾಡಲು ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಬದಲು ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯಕರ ಜೀವನ ಸೃಷ್ಟಿ ಅತ್ಯಗತ್ಯವಾಗಿರುತ್ತದೆ. ಈ ಆಂದೋಲನ ಯಶಸ್ಸಿಗೆ ನಮಗೆ ಹೆಚ್ಚಿನ ಸಂಖ್ಯೆಯ ಸಂಘಟನೆಗಳು ಬೇಕಾಗುತ್ತವೆ ಎಂದು ಹೇಳಿದರು.
ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ಸಂಘಟನೆಗಳಿಂದ ಸಾಮೂಹಿಕ ಪ್ರಯತ್ನಗಳು ಅಗತ್ಯವಿದ್ದರೂ, ಪ್ರತಿಯೊಬ್ಬರೂ ಆರೋಗ್ಯಕರ ಜೀವನವನ್ನು ನಡೆಸಲು ವೈಯಕ್ತಿಕವಾಗಿ ಬದ್ಧರಾಗಿರುವುದು ಅಷ್ಟೇ ಮುಖ್ಯವಾಗುತ್ತದೆ. ನಾವೆಲ್ಲರೂ ವೈಯಕ್ತಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಹೆಜ್ಜೆಗಳನ್ನು ಇಟ್ಟರೆ, ಅದು ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಬೆಂಗಳೂರಿಗೆ ಕಾರಣವಾಗುತ್ತದೆ ಎಂದು ಹೇಳಿದರು.