ಹಾವೇರಿ: 2022ನೇ ವರ್ಷದಲ್ಲಿ ಜಾನುವಾರುಗಳ ಜೀವಕ್ಕೆ ಮಾರಕವಾಗಿ ಕಾಡಿದ್ದ ಚರ್ಮಗಂಟು ರೋಗ ಇದೀಗ ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಕಳೆದೆರಡು ಮೂರು ತಿಂಗಳಿಂದ ಸಣ್ಣದಾಗಿ ಶುರುವಾದ ಈ ರೋಗ ಈಗ ಎಲ್ಲೆಡೆ ವ್ಯಾಪಿಸುತ್ತಿದೆ. ಹಾವೇರಿ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.
ಈ ಕುರಿತು ರೈತ ಗೋಣೆಪ್ಪಾ ಕರಿಗಾರ ಮಾತನಾಡಿ, ”ದೇವಹೊಸೂರು ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದ ಸುಮಾರು 200 ಎತ್ತುಗಳು ಸತ್ತಿವೆ. ರೋಗಕ್ಕೆ ಲಸಿಕೆ ಹಾಕಿದ್ದಾರೆ. ಅದರಲ್ಲೇ ಏನೋ ಲೋಪದೋಷಗಳಿವೆ. ಈಗ ಕಾಯಿಲೆ ಹೆಚ್ಚಾಗುತ್ತಿದೆ. ಹೀಗಾಗಿ ಎತ್ತುಗಳು ಸತ್ತಿರುವ ರೈತರಿಗೆ ಸರ್ಕಾರ ಏನಾದ್ರೂ ಪರಿಹಾರ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.
ಪಶು ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯರಿಲ್ಲ. ವೈದ್ಯರಿದ್ದರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದಾಗಿ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಜಾನುವಾರುಗಳು ನಲುಗುತ್ತಿವೆ ಎಂಬುದು ರೈತರ ದೂರು.
ಹಾವೇರಿ ಪಶುಪಾಲನೆ ಮತ್ತು ಪಶು ಇಲಾಖೆ ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಎಸ್.ವಿ.ಸಂತಿ ಪ್ರತಿಕ್ರಿಯಿಸಿ, “2022ರ ಆಗಸ್ಟ್ನಲ್ಲಿ ಈ ರೀತಿಯ ಪ್ರಕರಣ ಮೊದಲು ಕಂಡುಬಂದಿತ್ತು. ಆಗ ರೋಗ ಹೊಸದು. ಅದಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇರಲಿಲ್ಲ. 25,000 ಜಾನುವಾರುಗಳಿಗೆ ರೋಗ ತಗುಲಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಲಂಪಿಸ್ಕಿನ್ ತಡೆಯುವ ಗೋಟ್ ಪಾಕ್ಸ್ ಲಸಿಕೆ ಹಾಕಿಸಿತ್ತು. ಮೃತಪಟ್ಟ 2,994 ಜಾನುವಾರುಗಳಿಗೆ ಸರ್ಕಾರ ಪರಿಹಾರ ನೀಡಿತ್ತು” ಎಂದರು.
“ನಾಲ್ಕು ತಿಂಗಳಿಗಿಂತ ಕಡಿಮೆ ಮತ್ತು ಗರ್ಭ ಧರಿಸಿದ ಆಕಳುಗಳಿಗೆ ಲಸಿಕೆ ನೀಡುವುದಿಲ್ಲ. ಈ ರೀತಿ ಲಸಿಕೆ ಪಡೆಯದ ಜಾನುವಾರುಗಳಿಗೆ ಈಗ ಮತ್ತೆ ಲಂಪಿಸ್ಕಿನ್ ಕಾಣಿಸಿಕೊಂಡಿದೆ” ಎಂದು ಇದೇ ವೇಳೆ ಹೇಳಿದರು.
“2023-24ನೇ ಸಾಲಿನಲ್ಲಿ ಯಾವುದೇ ರೋಗಗಳು ಕಂಡುಬಂದಿರಲಿಲ್ಲ. ಆದರೆ ನಂತರ ನಾವು ಮಾಮೂಲಿಯಂತೆ ವ್ಯಾಕ್ಸಿನೇಷನ್ ಮಾಡುತ್ತಿದ್ದೇವೆ. ಈಗ ಜೂನ್-ಜುಲೈ ತಿಂಗಳಲ್ಲಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ” ಎಂದು ಅವರು ತಿಳಿಸಿದರು.
“ಜಿಲ್ಲೆಯಲ್ಲಿ ಇದುವರೆಗೆ 1,232 ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ಅದರಲ್ಲಿ 765 ಜಾನುವಾರುಗಳು ಗುಣಮುಖವಾಗಿವೆ. 400ಕ್ಕೂ ಅಧಿಕ ಜಾನುವಾರುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಸುಮಾರು 10 ಕರುಗಳು ಈ ರೋಗದಿಂದ ಸಾವನ್ನಪ್ಪಿವೆ” ಎಂದು ಡಾ.ಎಸ್.ವಿ.ಸಂತಿ ಹೇಳಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now