ವಿಜಯನಗರ (ಹೊಸಪೇಟೆ): ಎಲ್ಲೆಡೆ ಭಾರಿ ಮಳೆಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಅತಿ ಹೆಚ್ಚಿನ ಪ್ರಮಾಣದ ಒಳಹರಿವು ಹರಿದು ಬರುತ್ತಿರುವುರಿಂದ ಬುಧವಾರವೂ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಿದ ಪರಿಣಾಮ ವಿಶ್ವವಿಖ್ಯಾತ ಹಂಪಿಯಲ್ಲಿ ಕೆಲ ಸ್ಮಾರಕಗಳು ಮುಳುಗಡೆಯಾಗಿವೆ.
ಧಾರ್ಮಿಕ ವಿಧಿ ವಿಧಾನ ಮಂಟಪಗಳಲ್ಲಿ ಕಾರ್ಯ ಮಾಡಲು ಆಗಲಿಲ್ಲ ಎಂದು ಕಾರ್ಯಕ್ಕೆ ಬಂದವರು ಮಾತಾಡುತ್ತಿದ್ದರು. ಇದರ ಜತೆಗೆ ಸ್ನಾನಘಟ್ಟಗಳು ಮುಳುಗಿದ್ದು, ಕಂಪಭೂಪ ಮಾರ್ಗ ಬಂದ್ ಆಗಿದೆ. ಕೋದಂಡರಾಮ ದೇವಸ್ಥಾನದವರೆಗೆ ನೀರು ಬಂದಿದೆ. ಪುರಂದರ ಮಂಟಪ ಸೇರಿ ಇನ್ನಿತರೆ ನದಿಪಾತ್ರದ ಸ್ಮಾರಕಗಳು ಮುಳುಗಿವೆ.
ಹಂಪಿಯಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರೆಯ ಭೋರ್ಗರೆತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ದಂಡೆಯಲ್ಲಿಯಾರೂ ಹೋಗದಂತೆ, ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡುತ್ತಿರುವ ಪೊಲೀಸರು ಸ್ಥಳದಲ್ಲಿಯೇ ಇದ್ದು ಸೂಚನೆ ನೀಡಿದರು.
ಟಿಬಿ ಡ್ಯಾಂಗೆ 1.10 ಲಕ್ಷ ಕ್ಯುಸೆಕ್ ಒಳಹರಿವಿದ್ದು, 18 ಕ್ರಸ್ಟ್‌ಗೇಟ್‌ಗಳನ್ನು 3 ಅಡಿ ಮತ್ತು 3 ಕ್ರಸ್ಟ್‌ಗೇಟ್‌ಗಳನ್ನು 2.5 ಅಡಿ ಎತ್ತರಿಸಿ ಒಟ್ಟು 21 ಗೇಟ್‌ಗಳ ಮೂಲಕ 94,252 ಕ್ಯುಸೆಕ್ ನೀರು ನದಿಗೆ ಹಾಗೂ ಕಾಲುವೆಗಳು ಸೇರಿದಂತೆ ಒಟ್ಟು 1,05,009 ಕ್ಯುಸೆಕ್ ಹೊರಹರಿವು ದಾಖಲಾಗಿದೆ. ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಒಳಹರಿವು ಹೆಚ್ಚಾಗುತ್ತಲೇ ಇದ್ದು, ಜಲಾಶಯಕ್ಕೆ ಬರುತ್ತಿರುವ ಅಷ್ಟೇ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದೆ.
ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿಗಳಿದ್ದು, 1631.92 ಅಡಿ ನೀರಿನ ಸಂಗ್ರಹದೊಂದಿಗೆ, 1,10,759 ಸಾವಿರ ಕ್ಯುಸೆಕ್ ಒಳಹರಿವು ಇದ್ದು, 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿಸದ್ಯ 101.461 ಟಿಎಂಸಿ ನೀರಿನ ಸಂಗ್ರಹವಿದೆ.