ರಾಯಚೂರು: ಜಿಲ್ಲೆಯಲ್ಲಿ ಬೈಕ್ ಸವಾರರ ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯಗೊಳಿಸಿದರೂ ಸವಾರರು ಗಂಭೀರವಾಗಿಲ್ಲ. ಪೊಲೀಸರ ಭಯಕ್ಕೋ, ದಂಡದ ಭಯಕ್ಕೂ ಕಾಟಾಚಾರಕ್ಕೆ ಹೆಲ್ಮೆಟ್ ಧರಿಸುತ್ತಿದ್ದಾರೆ. ಇನ್ನು ಸರಿಯಾದ ಹೆಲ್ಮೆಟ್ ಇಲ್ಲದಿದ್ದರೂ ಸವಾರರು ಪೊಲೀಸರಿಗೆ ದಂಡ ಪಾವತಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಮಾಣಿಕೃತ ಹೆಲ್ಮೆಟ್‌ಗೆ ಅದರದ್ದೇ ಆದ ಮಹತ್ವವಿದೆ. ಗುಣಮಟ್ಟದ ಹೆಲ್ಮೆಟ್‌ಗೆ ವ್ಯಯಿಸುವ ಹಣ ಬೈಕ್ ಸವಾರರ ಜೀವ ರಕ್ಷಣೆಗಾಗಿ ಎಂಬುದನ್ನು ಮರೆಯಬಾರದು.
ಪೊಲೀಸರ ದಿಕ್ಕು ತಪ್ಪಿಸಲು ಕಾರ್ಖಾನೆಯಲ್ಲಿ ಕಾರ್ಮಿಕರು ಧರಿಸುವ ಸುರಕ್ಷತಾ ಟೊಪ್ಪಿಗೆ, ಸೈಕಲ್ ಸವಾರರು ಧರಿಸುವ ಪ್ಲಾಸ್ಟಿಕ್ ಟೊಪ್ಪಿಗೆ ವಾಹನ ಸವಾರರಿಗೆ ಸೂಕ್ತವಲ್ಲ. ಪೊಲೀಸರನ್ನು ಯಾಮಾರಿಸಲು ಕಳಪೆ ಹೆಲ್ಮೆಟ್ ಧರಿಸಿದರೂ ದಂಡ ತೆತ್ತಬೇಕಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಚ್ಚರಿಕೆ ನೀಡಿದ್ದಾರೆ.
‘ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಕಾರಣದಿಂದ ಹಲವರ ಜೀವ ಉಳಿದ ಉದಾಹರಣೆಗಳು ಇವೆ. ಹೆಲ್ಮೆಟ್ ಬಗೆಗೆ ನಿರ್ಲಕ್ಷ್ಯ ಯಾವತ್ತೂ ಸಲ್ಲದು. ಜನರ ರಕ್ಷಣೆಗೇ ಪೊಲೀಸರು ಇದ್ದಾರೆ.
ಪೊಲೀಸರ ಭಯಕ್ಕೋ, ದಂಡದ ಭಯಕ್ಕೂ ಹೆಲ್ಮೆಟ್ ಧರಿಸುವಂತಾಗಬಾರದು. ಪ್ರತಿಯೊಬ್ಬರು ತಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಕ್ಕೆ ದಂಡ ಪಾವತಿಸುವ ಮೊದಲೇ ಅದೇ ಮೊತ್ತದಲ್ಲಿ ಉತ್ತಮವಾದ ಹೆಲ್ಮೆಟ್ ಖರೀದಿಸಿಕೊಳ್ಳಬೇಕು. ನಿಮ್ಮ ಸುರಕ್ಷತೆಯ ಕಾಳಜಿ ನೀವೇ ವಹಿಸಿಕೊಳ್ಳಬೇಕು’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಮನವಿ ಮಾಡಿದ್ದಾರೆ.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಅವರು ನವೆಂಬರ್ 1ರಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ ನಂತರ ಮಾರುಕಟ್ಟೆಯಲ್ಲಿ ಹೆಲ್ಮೆಟ್ ಖರೀದಿ ಜೋರಾಗಿದೆ.
ಹೆಲ್ಮೆಟ್ ಮಾರಾಟ ಮಳಿಗೆಗಳಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೂ ಗ್ರಾಹಕರು ಚೌಕಾಶಿ ಮಾಡಿ ಹೆಲ್ಮೆಟ್‌ಗಳನ್ನು ಖರೀದಿಸುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಮಾರಾಟವಾಗುತ್ತಿವೆ. ಗ್ರಾಹಕರು ಹೆಲ್ಮೆಟ್ ಖರೀದಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಬೇಕು.
ಹೆಲ್ಮೆಟ್ ಆಯ್ಕೆಯಲ್ಲಿ ಎಡವಿದರೆ, ನಮ್ಮ ಪ್ರಾಣಕ್ಕೆ ಕುತ್ತು ಬರಲಿದೆ. ಆದ್ದರಿಂದ ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಖರೀದಿಸಿ ಎಂದು ಅಧಿಕೃತ ಹೆಲ್ಮೆಟ್ ಮಾರಾಟಗಾರರು ಗ್ರಾಹಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.
ತೆರೆದ ಮುಖದ ಹೆಲ್ಮೆಟ್ ನಲ್ಲಿ ಎರಡು ವಿಧಗಳ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅರ್ಧ ಹೆಲ್ಮೆಟ್ ಮತ್ತು ¾ ಹೆಲ್ಮೆಟ್. ಮಾಡ್ಯುಲರ್ ಹೆಲ್ಮೆಟ್ ಸಾಮಾನ್ಯವಾಗಿ ತಿರುಗುತ್ತದೆ.
ಸೈಕಲ್ ಸವಾರರು, ಕುದುರೆ ಸವಾರರು, ಕ್ರಿಕೆಟ್ ಆಟಗಾರರು ಹಾಗೂ ಕಂಪನಿಗಳಲ್ಲಿ ಕಾರ್ಮಿಕರು ಧರಿಸುವ ಹೆಲ್ಮೆಟ್‌ಗಳನ್ನು ಮೋಟರ್ ಸೈಕಲ್, ಬೈಕ್ ಹಾಗೂ ಸ್ಕೂಟರ್ ಮಾದರಿಯ ವಾಹನ ಚಲಾಯಿಸುವವರು ಧರಿಸುವುದು ಸೂಕ್ತವಲ್ಲ. ಕುತ್ತಿಗೆ ಭಾಗದವರೆಗೂ ಇರುವ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದ 5725 ಸವಾರರಿಗೆ ಒಂದು ವಾರದ ಅವಧಿಯಲ್ಲಿ ಪಟ್ಟು ₹28.64 ಲಕ್ಷ ದಂಡ ವಿಧಿಸಲಾಗಿದೆ.
ನವೆಂಬರ್ 1ರಂದು ರಾಜ್ಯೋತ್ಸವದ ದಿನ 638 ಸವಾರರಿಗೆ ₹ 3.19 ಲಕ್ಷ, ಎರಡನೇ ದಿನ ಗರಿಷ್ಠ 1140 ಮಂದಿಗೆ ₹ 5.70 ಲಕ್ಷ ದಂಡ ವಿಧಿಸಲಾಗಿದೆ. ಮೂರನೇ ದಿನ 1091 ಮಂದಿಯಿಂದ ₹ 5.45 ಲಕ್ಷ ದಂಡ ವಸೂಲಿ ಮಾಡಲಾಗಿದೆ.
‘ನ.1ರಿಂದ 7ರ ವರೆಗೆ ಒಂದು ವಾರದ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ 5725 ಬೈಕ್ ಸವಾರರಿಗೆ ತಿಳಿವಳಿಕೆ ನೀಡುವ ಜತೆಗೆ ₹ 28.64 ಲಕ್ಷ ದಂಡ ವಿಧಿಸಲಾಗಿದೆ.
ಬೈಕ್ ಸವಾರರಿಗೆ ದಂಡ ವಿಧಿಸುವುದು ಮುಖ್ಯವಲ್ಲ. ಬೈಕ್ ಸವಾರರ ಸುರಕ್ಷತೆಯೇ ಇಲಾಖೆಗೆ ಪ್ರಮುಖವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹೇಳಿದ್ದಾರೆ.