ಹುಬ್ಬಳ್ಳಿ: ಬಹು ಕಾಲದಿಂದ ಬೇಡಿಕೆ ಇರುವ ಹಾಗೂ ಸುದೀರ್ಘ ಅವಧಿಯಲ್ಲಿ ಮೂರು ಬಾರಿ ಸಮೀಕ್ಷೆ ಸಹ ನಡೆದ ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮತ್ತು ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ (New Railway Track) ಸಂಬಂಧ ಮಹತ್ವದ ಚರ್ಚೆ ನಡೆದಿದೆ.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕರ ಕಚೇರಿಯಲ್ಲಿ ಭಾನುವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ನೈಋತ್ಯ ರೈಲ್ವೆ ಮಹಾ ಪ್ರಬಂಧಕರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ತರ ಚರ್ಚೆ ನಡೆಸಲಾಯಿತು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ (V Somanna), ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಉಪಸ್ಥಿತಿಯಲ್ಲಿ ಚರ್ಚೆ ನಡೆಯಿತು. ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಲ್ಲ ಅಡೆ ತಡೆಗಳನ್ನು ನಿವಾರಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲು ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವನ್ನಾಗಿಸುವ ಕುರಿತು ಯೋಜನಾ ವರದಿ ಸಹಿತ ಶೀಘ್ರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು.
ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಬರುವ ಅಮೃತ ಭಾರತ ರೈಲ್ವೆ ನಿಲ್ದಾಣಗಳ ಕಾಮಗಾರಿ ತ್ವರಿತಗೊಳಿಸುವಿಕೆ ಹಾಗೂ ಇತರ ರೈಲ್ವೆ ಸಮಸ್ಯೆಗಳನ್ನೂ ನಿವಾರಿಸುವಂತೆ ನೈಋತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ಅವರಿಗೆ ಸೂಚಿಸಲಾಯಿತು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪ್ರಸಕ್ತ ಪರಿಸ್ಥಿತಿ, ಅಣ್ಣಿಗೇರಿ ನಿಲ್ದಾಣದ ರೈಲ್ವೇ ಓವರ್ ಬ್ರಿಡ್ಜ್ ಎಲ್.ಸಿ. 18, ಎಲ್.ಸಿ.19 ಬಗೆಗಿನ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂತು. ಸಾರ್ವಜನಿಕರ ಆಗ್ರಹದ ಮೇರೆಗೆ ವಾರದಲ್ಲಿ ಒಂದು ದಿನ ಹೊಸದಾಗಿ ಹುಬ್ಬಳ್ಳಿ-ಅಹಮದಾಬಾದ್ ಅಥವಾ ಹುಬ್ಬಳ್ಳಿ-ಜೋಧಪುರ ನಡುವೆ ರೈಲು ಓಡಿಸಲು ಮನವಿ ಮಾಡಲಾಯಿತು.
ಬಹಳ ಕಾಲದಿಂದಲೂ ಬೇಡಿಕೆಯಲ್ಲಿರುವ ಹುಬ್ಬಳ್ಳಿ-ವಾರಣಾಸಿ ರೈಲನ್ನು ವಾರದಲ್ಲಿ ಮೂರು ಬಾರಿ ಓಡಿಸುವಂತೆ ಇದೇ ವೇಳೆ ಸೂಚಿಸಲಾಯಿತು.
ಧಾರವಾಡ ರೈಲ್ವೆ ನಿಲ್ದಾಣದ ಬಳಿ ಖಾಲಿ ಇರುವ ಜಾಗದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸಲು ಹಾಗೂ ಎಲ್ಲಾ ಮಹತ್ವದ ರೇಲ್ವೆ ಅಭಿವೃದ್ಧಿ ಯೋಜನೆಗಳ ತ್ವರಿತ ಕಾರ್ಯಗತಕ್ಕೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಕ್ಷೇತ್ರದಲ್ಲಿ ಹಾಲಿ ಇರುವ ರೈಲ್ವೆ ಮೇಲ್ ಸೇತುವೆ ಹಾಗೂ ಕೆಳ ಸೇತುವೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ.
ಈ ಸಭೆಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಭಾಗವಹಿಸಿದ್ದರು.