ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು ಬಂದರಿನ ಅಭಿವೃದ್ಧಿಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ನಲ್ಲಿ ಜಾಗತಿಕ ಟೆಂಡರ್ ಆಹ್ವಾನಿಸಿದೆ.
ನಿರ್ವಹಿಸಬಹುದಾದ ಸರಕುಗಳು ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಕೋಕಿಂಗ್ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಡಾಲಮೈಟ್, ಹಸಿರು ಹೈಡ್ರೋಜನ್, ಹಸಿರು ಅಮೋನಿಯಾ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳು ಮುಂತಾದವುಗಳು.
ಆರಂಭದಲ್ಲಿ 14 MTPA (ಮಿಲಿಯನ್ ಟನ್ ಪ್ರತಿ ವರ್ಷ) ಸಾಮರ್ಥ್ಯದ ಕಾರ್ಗೊ ನಿರ್ವಹಣೆಗೆ ಯೋಜಿಸಲಾಗಿದ್ದು, ಭವಿಷ್ಯದಲ್ಲಿ ಸುಮಾರು 40 MTPA ಗೆ ವಿಸ್ತರಿಸುವ ಸಾಧ್ಯತೆಯನ್ನು ಹೊಂದಿದೆ.
ಬಂದರವು 1,80,000 DWT ಸಾಮರ್ಥ್ಯದ ಬೃಹತ್ ಗಾತ್ರದ ಹಡಗುಗಳನ್ನು ನಿರ್ವಹಿಸಲು ಆಧುನಿಕ, ಪರಿಸರ ಸ್ನೇಹಿ ಮತ್ತು ಹೆಚ್ಚಿನ ಸಾಮರ್ಥ್ಯದ ಉಪಕರಣಗಳೊಂದಿಗೆ ಆಳವಾದ ವಾಣಿಜ್ಯ ಹಡಗುಗಳು ತಂಗಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಅಳವಡಿಸಲು ಅವಕಾಶವಿರುತ್ತದೆ.
ಬಂದರಿನ ಸುಗಮ ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು 214 ಹೆಕ್ಟರ್ ಬಂದರು ಜಾಗೆ ಲಭ್ಯವಾಗುವ ಸಾಧ್ಯತೆ ಇದೆ. ಉದ್ದೇಶಿತ ಬಂದರು ಜಾಗೆಯನ್ನು ಹೂಳೆತ್ತುವಿಕೆಯ ಮಣ್ಣಿನಿಂದ ಭರಾವು ಮಾಡಿ ಸೃಜಿಸಲಾಗುತ್ತದೆ.
ಸದರಿ ಬಂದರಿನ ಅಭಿವೃದ್ಧಿಗೆ ಯೋಜನಾ ವೆಚ್ಚ 3,047.86 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪಾವಿನಕುರ್ವೆ ಬಂದರಿನ ಅಭಿವೃದ್ಧಿಗೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಾವಿನಕುರ್ವೆ ಗ್ರಾಮದ ಸಮೀಪದ ಶರಾವತಿ ಮತ್ತು ಬಡಗಣಿ ನದಿ ಮುಖಜ ಭಾಗದಲ್ಲಿದೆ.
ಕರ್ನಾಟಕ ಜಲಸಾರಿಗೆ ಮಂಡಳಿಯು ಉದ್ದೇಶಿತ ಪಾವಿನಕುರ್ವೆ ಬಂದರಿನ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅರ್ಹ ಉದ್ದಿಮೆದಾರರಿಂದ ಜಾಗತಿಕ ಬಿಡ್‌ನ್ನು ಆಹ್ವಾನಿಸುತ್ತದೆ.
ಬಿಡ್‌ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 09.01.2025 ರಂದು ಸಂಜೆ 5: 30 ಗಂಟೆಗೆ ನಿಗದಿಯಾಗಿರುತ್ತದೆ.