ಬೆಂಗಳೂರು: ನಗರದಲ್ಲಿ ಅ. 6 ರಿಂದ ಒಂದು ವಾರ ಮಳೆಯಾಗಲಿದೆ. ಅ. 7 ರಿಂದ ಅ.9ರವೆರೆಗೆ ಕೆಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೊಅಲರ್ಟ್ ಘೋಷಿಸಿದೆ.
ರಾಜಧಾನಿಯ ಹಲವೆಡೆ ಶುಕ್ರವಾರ ರಾತ್ರಿಯೂ ಜೋರು ಮಳೆಯಾಗಿದೆ. ರಾತ್ರಿ 8 ಗಂಟೆಗೆ ಶುರುವಾದ ಮಳೆ ಮುಂಜಾನೆವರೆಗೆ ಸುರಿಯಿತು. ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಮರಗಳು, ರೆಂಬೆ-ಕೊಂಬೆಗಳು ಬಿದ್ದು ಅವಾಂತರಗಳು ಸೃಷ್ಟಿಯಾದವು.
ದಾಸರಹಳ್ಳಿ ವಲಯದಲ್ಲಿ 12.58 ಮಿ.ಮೀ, ಪಶ್ಚಿಮ ವಲಯದಲ್ಲಿ 11.61 ಮಿ.ಮೀ, ಹಾಗೂ ಪೂರ್ವ ಮತ್ತು ರಾಜರಾಜೇಶ್ವರಿ ವಲಯದಲ್ಲಿ ತಲಾ 10 ಮಿ.ಮೀ, ಬೊಮ್ಮನಹಳ್ಳಿ ವಲಯದಲ್ಲಿ 8.76 ಮಿ.ಮೀ, ದಕ್ಷಿಣ ವಲಯದಲ್ಲಿ 9.27 ಮಿ.ಮೀ ಮತ್ತು ಯಲಹಂಕ ವಲಯದಲ್ಲಿ 5.8 ಮಿ.ಮೀ ಮಳೆಯಾಗಿದೆ.
ಪ್ರಮುಖವಾಗಿ ಅಗರದಲ್ಲಿ 35.5 ಮಿ.ಮೀ, ವಿಜಯನಗರ 29 ಮಿ.ಮೀ, ಹೊಸಹಳ್ಳಿ, ಹಂಪಿನಗರ, ಬಾಪೂಜಿನಗರ, ಗೀತಾಂಜಲಿ ನಗರ, ಗಿರಿನಗರ, ಗಾಳಿ ಆಂಜನೇಯ ದೇವಸ್ಥಾನದಲ್ಲಿ ತಲಾ 29 ಮಿ.ಮೀ, ಗರುಡಾಚಾರ್ ಪಾಳ್ಯ, ವಸಂತನಗರ, ಬಿಟಿಎಂ ಲೇಔಟ್, ಜಯನಗರ ಪೂರ್ವದಲ್ಲಿ ತಲಾ 27 ಮಿ.ಮೀ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜ ಪೇಟೆ, ಶಾಂತಲಾನಗರ ಮತ್ತು ಶಾಂತಿನಗರದಲ್ಲಿ ತಲಾ 26 ಮಿ.ಮೀ ಮಳೆಯಾಗಿದೆ.