ನವದೆಹಲಿ: ವಿಪಕ್ಷಗಳ I.N.D.I.A ಕೂಟದಲ್ಲಿ ಅಸಮಾಧಾನದ ಬುಗ್ಗೆ ಮತ್ತೆ ಹೊಗೆಯಾಡುತ್ತಿದೆ. ಕೂಟದ ನಾಯಕತ್ವದ ವಿಚಾರವಾಗಿ ಟಿಎಂಸಿ, ಕಾಂಗ್ರೆಸ್ ಮಧ್ಯೆ ಜಟಾಪಟಿ ಶುರುವಾಗಿದೆ.
ವಿಪಕ್ಷಗಳ I.N.D.I.A ಕೂಟದಲ್ಲಿ ಮತ್ತೆ ಅಪಸ್ವರ ಕೇಳಿಬಂದಿದೆ. ಕಾಂಗ್ರೆಸ್ ನೇತೃತ್ವದಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ, ಮೈತ್ರಿಕೂಟದ ನಾಯಕತ್ವವನ್ನು ತಾನು ವಹಿಸಿಕೊಳ್ಳುವುದಾಗಿ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಇದಕ್ಕೆ ಮಿತ್ರಪಕ್ಷಗಳು ಮಿಶ್ರ ಬೆಂಬಲ ವ್ಯಕ್ತಪಡಿಸಿವೆ.
ಇಂಡಿಯಾ ಕೂಟವನ್ನು ರಚಿಸಿದ್ದು ನಾನೇ. ಅದನ್ನು ಸರಿಯಾದ ದಿಸೆಯಲ್ಲಿ ನಡೆಸಿಕೊಂಡು ಹೋಗಬೇಕಾದುದು ನೇತೃತ್ವ ವಹಿಸಿದವರ ಜವಾಬ್ದಾರಿ. ಮಿತ್ರಪಕ್ಷಗಳು ಬಯಸಿದಲ್ಲಿ ನಾನೇ ಕೂಟದ ಮುಂದಾಳತ್ವ ವಹಿಸಿಕೊಳ್ಳುವೆ ಎಂದು ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ವಿಪಕ್ಷಗಳ ಕೂಟದ ನಾಯಕತ್ವವನ್ನು ತಾನು ವಹಿಸಿಕೊಳ್ಳುವುದಾಗಿ ಹೇಳಿಕೆ ನೀಡಿರುವ ಮಮತಾಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಯಾವ ಜವಾಬ್ದಾರಿ ನಿಭಾಯಿಸಿದ್ದಾರೆ. ಬಂಗಾಳದಲ್ಲಿ ಸತತ 3 ಬಾರಿ ಅಧಿಕಾರ ವಹಿಸಿಕೊಂಡರೂ ತಮ್ಮ ಪಕ್ಷವನ್ನು ಬೇರೆ ರಾಜ್ಯಗಳಲ್ಲಿ ವಿಸ್ತರಿಸಲು ಸಾಧ್ಯವಾಗಿಲ್ಲ. ಹೀಗಿದ್ದಾಗ, ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಅವರಿಗೆ ಇದೆಯೇ ಎಂದು ಕಾಂಗ್ರೆಸ್ ನಾಯಕರು ಕೇಳಿದ್ದಾರೆ.
ಕೂಟದಲ್ಲಿ ಕೆಲ ಮಿತ್ರಪಕ್ಷಗಳಲ್ಲಿ ಅಸಮಾಧಾನ ಇದೆ. ಅದನ್ನು ಹೊಣೆಗಾರಿಕೆ ಹೊತ್ತವರು ನಿಭಾಯಿಸಬೇಕು. ನಾನು ಬಂಗಾಳವನ್ನು ಬಿಡಲ್ಲ. ಕೂಟದ ನಾಯಕತ್ವ ನೀಡಿದಲ್ಲಿ ಇಲ್ಲಿಂದಲೇ ನಾನು ಅದನ್ನು ನಡೆಸಬಲ್ಲೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಸಾಧನೆ ಮಾಡಲು ಎಡವಿದ ಕಾಂಗ್ರೆಸ್ನ ಸಾಮರ್ಥ್ಯವನ್ನೂ ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ವಿಪಕ್ಷ ಕೂಟದಲ್ಲಿರುವ ಸಮಾಜವಾದಿ ಪಕ್ಷ ಮತ್ತು ಶಿವಸೇನೆ (ಉದ್ಧವ್ ಬಣ) ಮಮತಾ ಹೇಳಿಕೆಯನ್ನು ಸಮರ್ಥಿಸಿವೆ. ಮಮತಾ ಅವರಿಗೆ ಜವಾಬ್ದಾರಿ ಹಸ್ತಾಂತರಿಸಲು ಮೈತ್ರಿಕೂಟ ಸಂಪೂರ್ಣ ಬೆಂಬಲಿಸುವುದಾಗಿ ಹೇಳಿವೆ. ಬಂಗಾಳದಲ್ಲಿ ಬಿಜೆಪಿ ವಿರುದ್ಧ ದೀದಿ ಏಕಾಂಗಿಯಾಗಿ, ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಎಸ್‌ಪಿ ನಾಯಕರು ಹೊಗಳಿದ್ದಾರೆ.
ಮೈತ್ರಿಕೂಟವನ್ನು ಮುನ್ನಡೆಸಲು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಸೂಕ್ತ ನಾಯಕ ಎಂದು ಆರ್ಜೆಡಿ ಅಭಿಪ್ರಾಯಪಟ್ಟಿದ್ದರೆ, ಹರಿಯಾಣ ಮತ್ತು ಮಹಾರಾಷ್ಟ್ರ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ. ವಿಪಕ್ಷಗಳ ಕೂಟದಲ್ಲಿ ಎಲ್ಲ ಮಿತ್ರಪಕ್ಷಗಳಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದಿದ್ದಾರೆ.
ಇಂಡಿಯಾ ಕೂಟದ ಆಂತರಿಕ ಬೇಗುದಿಯನ್ನು ಅಣಕವಾಡಿರುವ ಬಿಜೆಪಿ ಅಧಿಕಾರ ದಾಹ ಮತ್ತು ಭ್ರಷ್ಟರನ್ನು ರಕ್ಷಿಸುವುದೇ ಅದರ ಮುಖ್ಯ ಉದ್ದೇಶ ಎಂದು ಆರೋಪಿಸಿದೆ. ಪ್ರಧಾನಿ ಮೋದಿ ಅವರನ್ನು ಸೋಲಿಸುವುದನ್ನು ಹೊರತುಪಡಿಸಿ ಯಾವುದೇ ಅಜೆಂಡಾ ಇಲ್ಲದ ಗುಂಪು ಎಂದು ವ್ಯಂಗ್ಯವಾಡಿದೆ.
ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಯಲ್ಲಿ ಪ್ರಮುಖ ಪಾಲುದಾರರಾಗಲು ಬಯಸಿದ್ದಾರೆ. ಸದ್ಯದಲ್ಲೇ ಮಿತ್ರಪಕ್ಷಗಳೊಂದಿಗೆ ಕೋಲ್ಕತ್ತಾಗೆ ತೆರಳಿ ದೀದಿಯನ್ನು ಭೇಟಿಯಾಗಲಿದ್ದೇವೆ. ಮೈತ್ರಿಕೂಟದ ಸಭೆ ನಡೆಯುವಾಗ ನಾಯಕತ್ವದ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಉದ್ಧವ್ ಬಣದ ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now