ಅತ್ಯಂತ ಕಡಿಮೆ ಅವಧಿಯಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಡೀ ವಿಶ್ವವೇ ಬೆರಗುಗೊಳಿಸುವ ಪವಾಡವನ್ನು ಇಸ್ರೋ ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಇದೀಗ ಶುಕ್ರಯಾನ್ (Shukrayaan) ಉಡಾವಣೆಗೆ ಸದ್ದಿಲ್ಲದೇ ಸಿದ್ಧತೆ ಆರಂಭಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಇಸ್ರೋ ವಿಜ್ಞಾನಿಗಳು ಒಪ್ಪಿಗೆ ಪಡೆದುಕೊಂಡಿದ್ದು, ‘ಶುಕ್ರಯಾನ್ ಮಿಷನ್’ ಅಭಿಯಾನ ಶುರುವಾಗಿದೆ.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸೂರ್ಯ ಶಿಕಾರಿಗೆ ಇಳಿದಿದ್ದರು. ಇದೀಗ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವ್ಯವಸ್ಥೆಗಳು ಕೂಡ ಪೂರ್ಣಗೊಂಡಿವೆ. ಮಂಗಳ ಗ್ರಹದಲ್ಲಿ ಪ್ರಯೋಗ ನಡೆಸಿ ಮಹತ್ವದ ಸಂಗತಿಗಳನ್ನು ಜಗತ್ತಿಗೆ ತಿಳಿಸಿದ ನಂತರ ಶುಕ್ರ ಗ್ರಹದ ಮೇಲೆ ವಿಜ್ಞಾನಿಗಳ ಕಣ್ಣು ಬಿದ್ದಿದೆ.
ಶುಕ್ರ ಗ್ರಹದ ಪ್ರಯೋಗಕ್ಕಾಗಿ ‘ಶುಕ್ರ ಯಾನ’ ಯೋಜನೆ ಬಗ್ಗೆ ವಿಜ್ಞಾನಿಗಳು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಅನುಮೋದನೆ ನೀಡಿದೆ. ಇಸ್ರೋ ವಿಜ್ಞಾನಿಗಳ ಮಹತ್ವಕಾಂಕ್ಷೆ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಇಸ್ರೋ ನಿರ್ದೇಶಕ ನಿಲೇಶ್ ದೇಸಾಯಿ ಮಾಹಿತಿ ನೀಡಿದ್ದಾರೆ. 2028ರಲ್ಲಿ ‘ಶುಕ್ರ ಯಾನ’ ಪ್ರಯೋಗ ನಡೆಯಲಿದೆ.
ಚಂದ್ರನ ಮೇಲೆ ನಡೆಸಿದ ಪ್ರಯೋಗಗಳ ಸರಣಿಯಂತೆಯೇ, ಶುಕ್ರ ಗ್ರಹದ ಮೇಲೂ ವಿಜ್ಞಾನಿಗಳು ಪ್ರಯೋಗ ನಡೆಸಲಿದ್ದಾರೆ.
ಶುಕ್ರಯಾನ್ ಅನ್ನೋದ ಸಂಸ್ಕೃತದ ಪದ ಎಂದು ಇಸ್ರೋ ಹೇಳಿದೆ. ಶುಕ್ರ ಎಂಬ ಪದವು ಶುಕ್ರ ಗ್ರಹವನ್ನು ಸೂಚಿಸುತ್ತದೆ. ಯಾನ ಎಂದರೆ ಸಂಸ್ಕೃತದಲ್ಲಿ ಕರಕುಶಲ ಅಥವಾ ಪಾತ್ರೆ ಎಂದರ್ಥ. ಅದಕ್ಕಾಗಿಯೇ ಇದಕ್ಕೆ ಶುಕ್ರ ಯಾನ್ ಎಂದು ಹೆಸರಿಡಲಾಗಿದೆ.
ಶುಕ್ರನ ಮೇಲ್ಮೈಯಲ್ಲಿನ ವಾತಾವರಣದ ಸ್ಥಿತಿ ಅಧ್ಯಯನ ಮಾಡಲು ಇಸ್ರೋ ವಿಶೇಷ ಉಪಕರಣ ನಿರ್ಮಿಸಲಿದೆ. ಸುಧಾರಿತ ಉಪಕರಣಗಳನ್ನು ಅಲ್ಲಿಗೆ ಕಳುಹಿಸುತ್ತದೆ. ಅಲ್ಲಿನ ಹವಾಮಾನ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲಿದೆ. ಇಸ್ರೋ ಶುಕ್ರಯಾನಕ್ಕೆ ಅಂತಾರಾಷ್ಟ್ರೀಯ ಸಹಕಾರವನ್ನೂ ಪಡೆಯಲಿದೆ.