ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ ‘ಭಾರತೀಯ ಭಾಷಾ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದೇಶದ ವಿವಿಧ ಭಾಷೆಗಳ ಬಗ್ಗೆ ಅರಿವು ಹಾಗೂ ಮೆಚ್ಚುಗೆ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ʼಭಾರತೀಯ ಭಾಷಾ ಉತ್ಸವ’ವನ್ನು ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ ಸುಬ್ರಮಣ್ಯ ಭಾರತೀ ಅವರ ಜನ್ಮದಿನಾಚರಣೆಯ ಅಂಗವಾಗಿ ಡಿಸೆಂಬರ್ 4ರಿಂದ 11ರವರೆಗೆ ಆಚರಿಸಲಾಗುತ್ತದೆ.
ಶಾಲಾ ಹಂತದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ‘ಭಾಷೆಗಳ ಮೂಲಕ ಏಕತೆ ‘ ಎಂಬ ಥೀಮ್‌ನೊಂದಿಗೆ ಶಾಲಾ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಿ, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಲು ವಿವಿಧ ಭಾಷಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚನೆ ನೀಡಿದೆ.
ಭಾಷೆಗಳ ಮೂಲಕ ನಮ್ಮ ಸಮಾಜವನ್ನು ಶ್ರೀಮಂತಗೊಳಿಸುವುದು. ನಮ್ಮ ನಾಗರಿಕರಲ್ಲಿ, ಶಾಲೆಯ ವಿದ್ಯಾರ್ಥಿಗಳಲ್ಲಿ ಭಾರತೀಯ ಭಾಷೆಗಳು ಮತ್ತು ಸಾಹಿತ್ಯದ ಬಗ್ಗೆ ಆಳವಾದ ಮೆಚ್ಚುಗೆಯನ್ನು ಬೆಳೆಸುವುದು. ನಮ್ಮ ದೇಶದ ಭಾಷಾ ಪರಂಪರೆಯನ್ನು ಸಂರಕ್ಷಿಸಿ. ಅದರ ಬಗ್ಗೆ ಹಮ್ಮೆಯ ಭಾವನ ಮೆಚ್ಚುಗೆಯನ್ನು ಬೆಳೆಸುವುದು.
ಹೊಸ ಪೀಳಿಗೆಯ ಭಾಷಾಭಿಮಾನಿಗಳಿಗೆ ಸ್ಪೂರ್ತಿ ನೀಡುವುದು ಇದರ ಉದ್ಧೇಶವಾಗಿದೆ. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ ಇವರು ಸೂಚಿಸಿರುವ ಚಟುವಟಿಕೆಗಳನ್ನು ಹಮ್ಮಿಕೊಂಡು ಎಲ್ಲಾ ಶಾಲೆಗಳಲ್ಲಿ ‘ಭಾರತೀಯ ಭಾಷಾ ಉತ್ಸವ “ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಇಲಾಖೆ ತಿಳಿಸಿದೆ.