spot_img
spot_img

ವೈಜ್ಞಾನಿಕ ಸಂಶೋಧನೆಗೆ ಕೊಡುಗೆ ನೀಡಿರುವ 6 ಮಂದಿಗೆ ಇನ್ಫೊಸಿಸ್-2024 ಪ್ರಶಸ್ತಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅಸಾಮಾನ್ಯ ಕೊಡುಗೆ ನೀಡಿರುವ ಆರು ಸಂಶೋಧಕರಿಗೆ 2024ನೇ ಸಾಲಿನ ಇನ್ಫೊಸಿಸ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಆರು ವಿಭಾಗಗಳಲ್ಲಿ ‘ಇನ್ಫೊಸಿಸ್ ಪ್ರಶಸ್ತಿ 2024’ಕ್ಕೆ ಆಯ್ಕೆ ಆಗಿರುವವರ ಹೆಸರುಗಳನ್ನು ಇನ್ಫೊಸಿಸ್ ಸೈನ್ಸ್ ಫೌಂಡೇಷನ್ (ಐಎಸ್‌ಎಫ್‌) ಗುರುವಾರ ಘೋಷಿಸಿತು. ನಗರದ ಸೌತ್ ಎಂಡ್ ಸರ್ಕಲ್​ನಲ್ಲಿರುವ ಐಎಸ್‌ಎಫ್‌ ಕಚೇರಿಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಯಿತು.

ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಐಎಸ್‌ಎಫ್‌ನ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್ (ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ), ನಾರಾಯಣಮೂರ್ತಿ, ಕೆ.ದಿನೇಶ್, ಡಾ.ಪ್ರತಿಮಾ ಮೂರ್ತಿ, ಮೋಹನದಾಸ್ ಪೈ ಮತ್ತು ಎಸ್‌.ಡಿ.ಶಿಬುಲಾಲ್ ಅವರು ಘೋಷಿಸಿದರು.

ಐಎಸ್‌ಎಫ್‌ನ ಇತರ ಟ್ರಸ್ಟಿಗಳಾದ ನಂದನ್ ನಿಲೇಕಣಿ, ಶ್ರೀನಾಥ್ ಬಾಟ್ನಿ ಮತ್ತು ಸಲೀಲ್ ಪಾರೇಖ್ ಅವರು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿರುವವರನ್ನು ಅಭಿನಂದಿಸಿದರು.

ಅರ್ಥಶಾಸ್ತ್ರ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ ಮತ್ತು ಭೌತ ವಿಜ್ಞಾನ ಸೇರಿ ಆರು ವಿಭಾಗಗಳಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿ ಗಣನೀಯ ಪ್ರಭಾವ ಬೀರಿದಂತಹ ಸಂಶೋಧನೆ ನಡೆಸಿದ ಹಾಗೂ ವಿದ್ವತ್ತನ್ನು ಹೊಂದಿರುವ ವ್ಯಕ್ತಿಗಳ ಗುರುತರ ಸಾಧನೆಗಳನ್ನು ಗೌರವಿಸಲಾಗಲಿದೆ. ಪ್ರತಿ ವಿಭಾಗದಲ್ಲಿ ನೀಡುವ ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸನಾಪತ್ರ, 1 ಲಕ್ಷ ಅಮೆರಿಕನ್ ಡಾಲರ್ ಮೊತ್ತ ಒಳಗೊಂಡಿರುತ್ತದೆ.

ಇನ್ಫೊಸಿಸ್‌ ಪ್ರಶಸ್ತಿಗೆ ಪಾತ್ರರಾದವರನ್ನು ಖ್ಯಾತ ವಿದ್ವಾಂಸರು ಹಾಗೂ ತಜ್ಞರನ್ನು ಒಳಗೊಂಡ, ಅಂತಾರಾಷ್ಟ್ರೀಯ ತೀರ್ಪುಗಾರರ ಮಂಡಳಿಯು ಆಯ್ಕೆ ಮಾಡಿದೆ. ಈ ಬಾರಿಯ ಪ್ರಶಸ್ತಿಗಳನ್ನು 40 ವರ್ಷಕ್ಕಿಂತ ಕಡಿಮೆ ವಯಸ್ಸಾದವರಿಗೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇನ್ಫೊಸಿಸ್‌ ತಿಳಿಸಿದೆ.

ಪ್ರಶಸ್ತಿ ಘೋಷಿಸಿ ಮಾತನಾಡಿದ ಇನ್ಫೊಸಿಸ್ ಸೈನ್ಸ್‌ ಪೌಂಡೇಷನ್‌ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ”ಸಂಶೋಧನೆ ಮತ್ತು ವಿಜ್ಞಾನದ ಭವಿಷ್ಯವನ್ನು ರೂಪಿಸುತ್ತಿರುವ ಅದ್ಭುತ ಮನಸ್ಸುಗಳನ್ನು ಗುರುತಿಸುವಲ್ಲಿ ಇನ್ಫೊಸಿಸ್ ಪ್ರಶಸ್ತಿಯು ಬಹಳ ಮಹತ್ವದ ಪಾತ್ರ ವಹಿಸಿದೆ.

ಈ ವರ್ಷ ನಾವು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ವೃತ್ತಿ ಜೀವನದಲ್ಲಿ ಇನ್ನೂ ಆರಂಭಿಕ ಹಂತಗಳಲ್ಲಿ ಇರುವವರನ್ನು ಗುರುತಿಸಲು ಗಮನ ನೀಡಿದ್ದೇವೆ. ಅಸಾಮಾನ್ಯ ಸಾಮರ್ಥ್ಯ ಇರುವವರನ್ನು ಗುರುತಿಸಲು ಯತ್ನ ಮಾಡಿದ್ದೇವೆ. ಇವರ ಸಾಧನೆಯು ವಿಜ್ಞಾನ ಮತ್ತು ಸಮಾಜದ ನಡುವಿನ ಮಹತ್ವದ ನಂಟನ್ನು ಒತ್ತಿ ಹೇಳುತ್ತಿದೆ. ಮುಂದಿನ ತಲೆಮಾರಿನ ಸಂಶೋಧಕರಿಗೆ ಸ್ಫೂರ್ತಿಯಾಗಿದೆ” ಎಂದು ಹೇಳಿದರು.
ಅರ್ಥಶಾಸ್ತ್ರ – ಅರುಣ್ ಚಂದ್ರಶೇಖರ್: ಅರ್ಥಶಾಸ್ತ್ರ ವಿಭಾಗದಲ್ಲಿ 2024ನೇ ಸಾಲಿನ ಇನ್ಫೊಸಿಸ್ ಪ್ರಶಸ್ತಿಯನ್ನು ಅರುಣ್ ಚಂದ್ರಶೇಖರ್ ಅವರಿಗೆ ಘೋಷಿಸಲಾಗಿದೆ. ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಕಂಪ್ಯೂಟರ್ ವಿಜ್ಞಾನ ಹಾಗೂ ಮೆಷಿನ್‌ ಲರ್ನಿಂಗ್‌ನಿಂದ ಹೊಸ ರೀತಿಯಲ್ಲಿ ದತ್ತಾಂಶಗಳನ್ನು ಬಳಕೆ ಮಾಡಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಜಾಲಗಳ ಅಧ್ಯಯನಕ್ಕೆ ನೀಡಿರುವ ಕೊಡುಗೆಗಳಿಗಾಗಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿಯನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಕೂಲ್‌ನ ಪ್ರೊಫೆಸರ್‌ ಶ್ಯಾಮ್ ಗೊಲ್ಲಕೋಟ ಅವರಿಗೆ ನೀಡಲಾಗುತ್ತಿದೆ. ಕಡಿಮೆ ಹಾಗೂ ಮಧ್ಯಮ ಪ್ರಮಾಣದ ವರಮಾನ ಹೊಂದಿರುವ ದೇಶಗಳಿಗೆ ಸ್ಮಾರ್ಟ್‌ಫೋನ್‌ ಆಧಾರಿತ ಕೈಗೆಟುಕುವ ದರದ ಆರೋಗ್ಯಸೇವಾ ಉಪಕರಣಗಳು, ಬ್ಯಾಟರಿ ಮುಕ್ತ ಕಂಪ್ಯೂಟಿಂಗ್ ಮತ್ತು ಸಂವಹನ ಸೇರಿದಂತೆ ಸಾಮಾಜಿಕವಾಗಿ ಉಪಯುಕ್ತವಾದ ವಿಭಾಗಗಳಲ್ಲಿ ಅವರು ನಡೆಸಿದ ಸಂಶೋಧನೆಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಇನ್ಫೊಸಿಸ್ ಪ್ರಶಸ್ತಿಯನ್ನು ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಇತಿಹಾಸ, ಶಾಸ್ತ್ರೀಯ ಮತ್ತು ಪುರಾತತ್ವ ಸ್ಕೂಲ್‌ನ ಪ್ರಾಧ್ಯಾಪಕ ಮಹಮೂದ್ ಕೂರಿಯಾ ಅವರಿಗೆ ಘೋಷಿಸಲಾಗಿದೆ.

ಜಾಗತಿಕ ದೃಷ್ಟಿಕೋನದಿಂದ ಇಸ್ಲಾಂ ಮತ್ತು ಸಂಬಂಧಿಸಿದ ವಿಷಯಗಳು, ಅದರಲ್ಲಿಯೂ ಮುಖ್ಯವಾಗಿ ಆಧುನಿಕಪೂರ್ವ ಮತ್ತು ಆಧುನಿಕ ಯುಗದ ಆರಂಭಿಕ ಹಂತದಲ್ಲಿ ಕೇರಳದಲ್ಲಿನ ಸ್ಥಿತಿಗತಿಯ ಬಗ್ಗೆ ಅವರು ನಡೆಸಿದ ಸಂಶೋಧನೆ ಮತ್ತು ಮಹತ್ವದ ಕೊಡುಗೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿಂದೂ ಮಹಾಸಾಗರದ ಅಂಚಿನ ಪ್ರದೇಶಗಳಲ್ಲಿ ಅರ್ಥವ್ಯವಸ್ಥೆ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿವರ್ತನೆಗಳಲ್ಲಿ ಇಸ್ಲಾಮಿಕ್ ಕಾನೂನು ವಹಿಸಿದ ಪಾತ್ರವನ್ನು ಅವರ ಸಂಶೋಧನೆಗಳು ಬಹಿರಂಗಪಡಿಸಿವೆ.

ಜೀವ ವಿಜ್ಞಾನ ವಿಭಾಗದಲ್ಲಿ ಈ ಸಾಲಿನ ಪ್ರಶಸ್ತಿಯನ್ನು ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಜೀವವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಸಿದ್ಧೇಶ್ ಕಾಮತ್ ಅವರಿಗೆ ನೀಡಲಾಗಿದೆ. ಜೀವಿಗಳ ಮೇಲೆ ಪ್ರಭಾವ ಬೀರುವ ಕೊಬ್ಬಿನ ಅಂಶಗಳ ಬಗ್ಗೆ ಅವರು ನಡೆಸಿರುವ ಸಂಶೋಧನೆಯನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಆಧುನಿಕ ಮಾದರಿಗಳನ್ನು ಅನುಸರಿಸಿ ಕೊಬ್ಬಿನ ಅಂಶಗಳ ಕಾರ್ಯವಿಧಾನ ಅರಿಯಲು ಅವರು ನಡೆಸಿರುವ ಈ ಸಂಶೋಧನೆಯು, ಮನುಷ್ಯನಿಗೆ ಉಂಟಾಗುತ್ತಿರುವ ಕಾಯಿಲೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೋಲ್ಕತ್ತಾದ ಭಾರತೀಯ ಸಾಂಖ್ಯಿಕ ಸಂಸ್ಥೆಯಲ್ಲಿ (ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌) ತಾತ್ತ್ವಿಕ ಸಂಖ್ಯಾಶಾಸ್ತ್ರ ಮತ್ತು ಗಣಿತ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ನೀನಾ ಗುಪ್ತಾ ಅವರಿಗೆ ಗಣಿತ ವಿಜ್ಞಾನ ವಿಭಾಗದ ಪ್ರಶಸ್ತಿ ಘೋಷಿಸಲಾಗಿದೆ. ಜಾರಿಸ್ಕಿ ಕ್ಯಾನ್ಸಲೇಷನ್‌ ಪ್ರಾಬ್ಲಮ್‌ನ ಕುರಿತು ಅವರು ನಡೆಸಿರುವ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಭೌತ ವಿಜ್ಞಾನದ ವಿಭಾಗದಲ್ಲಿನ ಪ್ರಶಸ್ತಿಯನ್ನು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ವೇದಿಕಾ ಖೇಮಾನಿ ಅವರು ಪಡೆದಿದ್ದಾರೆ. ಕ್ವಾಂಟಂ ಕಂಪ್ಯೂಟಿಂಗ್‌ ಹಾಗೂ ಇತರ ತಂತ್ರಜ್ಞಾನಗಳ ಭವಿಷ್ಯದ ಮೇಲೆ ಬಹುಮುಖ್ಯವಾದ ಪರಿಣಾಮಗಳನ್ನು ಉಂಟುಮಾಡಬಲ್ಲ ಸೋಂಶೋಧನೆಗೆ ನೀಡಿರುವ ಕೊಡುಗೆಗಳಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...