ಚಿಕ್ಕಬಳ್ಳಾಪುರ: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಳೆಯಿಲ್ಲದೆ ಬೆಳೆಗಳಿಗೆ ಹಿಂಗಾರು ಮಳೆಯಿಂದ ಮುಂದಿನ ದೀಪಾವಳಿವರೆಗೂ ಮಳೆ ಬರುವ ನಿರೀಕ್ಷೆ ಇದ್ದು, ಶೇ 100 ರಷ್ಟು ಬಿತ್ತನೆ ಮಾಡಿರುವ ರಾಗಿ ಬೆಳೆಗೆ ಜೀವ ತುಂಬಿದೆ
ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಹಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗಿದೆ. ಅದೇ ರೀತಿ ಈ ಬಾರಿಯೂ ಹಿಂಗಾರು ಕೊನೆಗೂ ಕೈ ಹಿಡಿಯುವ ಮುನ್ಸೂಚನೆ ನೀಡಿದ್ದು, ಒಣಗಿ ಹೋಗುತ್ತಿದ್ದ ರಾಗಿ ಬೆಳೆಗೆ ಆಗಾಗ್ಗೆ ಸುರಿಯುತ್ತಿರುವ ಮಳೆ ಜೀವದಾನ ಮಾಡಿದೆ.
2023 ರಲ್ಲಿ ತೀವ್ರ ಬರದಿಂದಾಗಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿತ್ತು. ರೈತರು ತಮ್ಮ ರಾಸುಗಳಿಗೆ ಮೇವು ಪೂರೈಸಲು ಪರದಾಡುವಂತಾಗಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಸುರಿದಿರುವ ಮಳೆಯಿಂದ ರೈತರಲ್ಲಿ ಭರವಸೆ ಮೂಡಿಸಿದೆ.
ಜಿಲ್ಲೆಯಲ್ಲಿ ದೀಪಾವಳಿವರೆಗೂ ಮಳೆ ಬರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಜಡಿ ಮಳೆಯಾಗಿರುವ ನಿದರ್ಶನಗಳೂ ಇವೆ. ಹೀಗಾಗಿ ರೈತರಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಆಗಸ್ಟ್ – ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬದಲು ಪ್ರಖರ ಬಿಸಿಲು ಇದ್ದಿದ್ದರಿಂದ ಬೆಳೆಗಳೆಲ್ಲ ಸುಟ್ಟು ಕರಕಲಾಗಲು ಆರಂಭಿಸಿದ್ದವು.
ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಶೇ.100 ರಷ್ಟು ಗುರಿ ಸಾಧನೆ ಮಾಡಲಾಗಿದೆ. ಈಗ ಸುರಿಯುತ್ತಿರುವ ಮಳೆ ಇನ್ನೊಂದು ತಿಂಗಳ ಕಾಲ ಆಗಾಗ್ಗೆ ಸುರಿದರೆ ಒಳ್ಳೆಯ ರಾಗಿ ಹಾಗೂ ಮೇವು ಸಿಗುವ ಸಾಧ್ಯತೆಯೂ ಹೆಚ್ಚಿದೆ.
ಉಳಿದಂತೆ ನೆಲಗಡಲೆ, ಮುಸುಕಿನ ಜೋಳ ಸೇರಿದಂತೆ ಮೊದಲೇ ಬಿತ್ತನೆಯಾಗಿರುವ ಬೆಳೆಗಳು ಮಳೆ ಕೊರತೆಯಿಂದ ಸಾಕಷ್ಟು ಹಾಳಾಗಿದ್ದು ರೈತರಿಗೆ ನಷ್ಟ ಸಂಭವಿಸಿದೆ.ಹಲವು ಬಾರಿ ಟ್ಯಾಂಕರ್ ಮೂಲಕ ನೀರನ್ನು ಹಾಕಿ ರಾಗಿ ಬೆಳೆಯನ್ನು ಕಾಪಾಡಿಕೊಂಡಿದ್ದೆವು. ಈಗ ಅಷ್ಟೋ ಇಷ್ಟೊ ಮಳೆ ಸುರಿದಿದ್ದರಿಂದ ರಾಗಿ ಹೊಲ ಚೆನ್ನಾಗಿದೆ. ಇನ್ನೊಂದು ತಿಂಗಳು ಆಗಾಗ್ಗೆ ಮಳೆ ಸುರಿದರೆ ಒಳ್ಳೆಯ ಬೆಳೆಯಾಗಲಿದೆ ಎಂದು ರೈತರು ತಿಳಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಬಿದ್ದಿರುವ ಮಳೆ ಕೇವಲ ರಾಗಿ ಬೆಳೆಗೆ ಅನುಕೂಲವಾಗಬಹುದು. ಆದರೆ ಮುಸುಕಿನ ಜೋಳ, ನೆಲಗಡಲೆ ಹೀಗೆ ಮೊದಲೇ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೊರತೆಯಿಂದ ಹಾಳಾಗಿವೆ. ಹೀಗಾಗಿ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸರಕಾರ ನೆರವು ನೀಡಬೇಕು. ರೈತ ಸಂಘದ ತಾಲೂಕು ಕಾರ್ಯದರ್ಶಿ ಬಾಲಮುರಳಿ ತಿಳಿಸಿದ್ದಾರೆ.