ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಪರ ಸಮಾನ ಮನಸ್ಕರಿಂದ ಬೆಂಗಳೂರಿನಲ್ಲಿ ಶುಕ್ರವಾರ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
“ನಮ್ಮ ನಾಡು ನಮ್ಮ ಆಳ್ವಿಕೆ” ವೇದಿಕೆ ಮತ್ತು ಕನ್ನಡಪರ ಸಮಾನ ಮನಸ್ಕರೆಲ್ಲಾ ಸೇರಿ ನಡೆಸುತ್ತಿರುವ ಬೈಕ್ ರ‍್ಯಾಲಿ, ನವೆಂಬರ್ 1 ಬೆಳಿಗ್ಗೆ 9.20 ರಿಂದ ಕಾರ್ಪೋರೇಶನ್ ಸರ್ಕಲ್ ಹತ್ತಿರ ಇರುವ ಬನಪ್ಪ ಪಾರ್ಕ್ ನಿಂದ ಶುರುವಾಗಲಿದೆ.
ಬೆಂಗಳೂರಿನ ಪ್ರಮುಖ ಸರ್ಕಲ್ ಗಳಲ್ಲಿ ಹಾಯ್ದು ಮಾರತಹಳ್ಳಿಯ ಮೂಲಕ ಫೀನಿಕ್ಸ್ ಮಾಲ್ ಮುಂದೆ ಬಾವುಟ ಹಾರಿಸುವ ಮೂಲಕ ಕೊನೆಗೊಳ್ಳಲಿದೆ.
ಈ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ನೂರಾರು ಜನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ, ಎಲ್ಲರೂ ನಾಡಿನ ಉಡುಗೆ ತೊಡುಗೆಯನ್ನು ತೊಟ್ಟು ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನ ಪಾಲಿಸುತ್ತ ಕನ್ನಡ ಬಾವುಟ ಹಾರಿಸುತ್ತಾ ಬೈಕ್ ರ‍್ಯಾಲಿ ಸಾಗಲಿದೆ.
ಈ ಸಡಗರದಲ್ಲಿ ಮತ್ತಷ್ಟು ಬೆರೆಯಬೇಕೆಂದರೆ ಬೆಂಗಳೂರಿನಲ್ಲಿರುವ ಈ ಬೈಕ್ ರ‍್ಯಾಲಿಗೆ ಕನ್ನಡ ಮನಸ್ಸುಗಳೆಲ್ಲಾ ಜೊತೆಯಾಗಿ, ಒಗ್ಗಟ್ಟಿನಿಂದ ಬೆಂಬಲಿಸಿ ಎಂದು ಆಯೋಜಕರು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ನವೆಂಬರ್ 1 ರಂದು ರಾಜ್ಯಾದ್ಯಂತ ಕನ್ನಡ ರಾಕ್ಯೋತ್ಸವದ ಸಂಭ್ರಮ ಮನೆಮಾಡಿದೆ. ರಾಜ್ಯ ಸರ್ಕಾರದಿಂದಲೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆರಚಣೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಇನ್ನು ಎಲ್ಲಾ ಸಂಸ್ಥೆಗಳಲ್ಲೂ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲು ಕರೆ ಕೊಡಲಾಗಿದೆ. ಆದರೆ ಯಾವುದೇ ಬಲವಂತ ಮಾಡಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಪರ ಸಂಘಟನೆಗಳಲ್ಲೂ ಮನವಿ ಮಾಡಿದ್ದಾರೆ.