ಬೆಂಗಳೂರು: ಬೆಂಗಳೂರು ಸುತ್ತಮುತ್ತಲಿನ 110 ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕಾವೇರಿ ಕುಡಿಯುವ ನೀರಿನ ಸಂಪರ್ಕದ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೇಸಿಗೆಯಲ್ಲಿ ನೀರಿನ ಕೊರತೆ ಮರುಕಳಿಸದಂತೆ ಎಲ್ಲಾ 110 ಹಳ್ಳಿಗಳಲ್ಲಿ ಮನೆ-ಮನೆಗೆ ಕಾವೇರಿ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಜನರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಪ್ರಚಾರ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು.
110 ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸಲು ಬಿಡಬ್ಲ್ಯುಎಸ್ಎಸ್ಬಿ ಸಿದ್ಧವಿದೆ.ಈಗಾಗಲೇ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಯಾಗುತ್ತಿದೆ. ಜನರು ಇದರ ಪ್ರಯೋಜನ ಪಡೆಯಲು ಸಂಪರ್ಕ ಪಡೆಯುವುದು ಅವಶ್ಯ. ಕೊಳವೆಬಾವಿ ಕೊರತೆಯಂತಹ ಸಮಸ್ಯೆಗಳು ಬರದಂತೆ ಜನರು ಕುಡಿಯುವ ನೀರಿನ ಸಂಪರ್ಕ ಪಡೆಯಬೇಕು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಮನೋಹರ್ ಬುಧವಾರ ಪೂರ್ವ ವಲಯದ ಚಳ್ಳಗೆರೆ ಮತ್ತು ಚನ್ನಸಂದ್ರ ಭಾಗದಲ್ಲಿ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾವೇರಿ ಸಂಪರ್ಕ ಅಭಿಯಾನದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.