ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಕ್ಡೋಬರ್ 23 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಉತ್ಸವ ನಿಮಿತ್ತ ಐತಿಹಾಸಿಕ ಕಿತ್ತೂರು ಪಟ್ಟಣ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ವರ್ಣರಂಜಿತ ದೀಪಗಳ ಬೆಳಕಿನಿಂದ ಕೋಟೆ ಸೌಂದರ್ಯ ಹೆಚ್ಚಾಗಿದೆ.
ಕಿತ್ತೂರು ಕೋಟೆ, ಪ್ರಾಚ್ಯವಸ್ತು ಸಂಗ್ರಹಾಲಯ, ದೇವಸ್ಥಾನಗಳು, ರಾಣಿ ಚನ್ನಮ್ಮಾಜಿ ವೃತ್ತ, ಗುರುವಾರ ಪೇಟೆ, ಅರಳಿಕಟ್ಟೆ ವೃತ್ತ, ಸೋಮವಾರ ಪೇಟೆ, ಚನ್ನಮ್ಮಾಜಿ ವೃತ್ತ, ಗೊಂಬಿ ಗುಡಿ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ನಾನಾ ಪ್ರದೇಶಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
6000 ಬಲ್ಬ್, 3000 ಎಲ್‌ಇಡಿ ಥ್ರೀಡಿ ಡಿಸೈನ್ ಲೈಟಿಂಗ್, 6000 ಲೈಟಿನ ಸರಗಳನ್ನು ಅಳವಡಿಸಲಾಗಿದೆ.
ಚೆನ್ನಮ್ಮ ಇತಿಹಾಸ ಮತ್ತು ಯುದ್ಧದಲ್ಲಿ ಭಾಗವಹಿಸಿದ ಸನ್ನಿವೇಶಗಳು ಸಾರುವ ವರ್ಣರಂಜಿತ ಚಿತ್ರಗಳನ್ನು ರಾಷ್ಟ್ರೀಯ ಹೆದ್ದಾರಿ ಗೋಡೆಗಳ ಮೇಲೆ ಬಿಡಿಸಲಾಗಿದೆ.
ನಾನಾ ಘಟನೆಗಳ ವರ್ಣರಂಜಿತ ಚಿತ್ರಗಳನ್ನು ಕಲಾವಿದ ಸಂತೋಷ ತುಬಾಕಿ ತಂಡ ರಚಿಸಿದೆ. ಕಿತ್ತೂರು ಸಂಸ್ಥಾನದ ನಂದಿ ಧ್ವಜದ ಚಿತ್ರವೂ ಗಮನ ಸೆಳೆಯುತ್ತಿದೆ.
ಚ.ಕಿತ್ತೂರು ಉತ್ಸವ-2024 ಮತ್ತು 200ನೇ ವಿಜಯೋತ್ಸವ ನಿಮಿತ್ತ ಪಟ್ಟಣಕ್ಕೆ ಸೋಮವಾರ ಆಗಮಿಸಿದ ವೀರಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಲಾಯಿತು. ಇಲ್ಲಿಯ ಚನ್ನಮ್ಮಾಜಿ ಅಶ್ವಾರೂಢ ಮೂರ್ತಿ ಎದುರು ತಾಲೂಕಾಡಳಿತ ಮತ್ತು ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಸ್ವಾಗತಿಸಿದರು.
ಚ. ಕಿತ್ತೂರು ಉತ್ಸವ ಮತ್ತು ವಿಜಯೋತ್ಸವ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ ವೀರಜ್ಯೋತಿ ರಥಯಾತ್ರೆಗೆ ಶಾಸಕ ಬಾಬಾಸಾಹೇಬ ಪಾಟೀಲ ಸ್ವಾಗತ ಕೋರಿದರು. ನಂತರ ಮಾತನಾಡಿ, ‘‘ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಚನ್ನಮ್ಮಾಜಿ ವಿಜಯೋತ್ಸವಕ್ಕೆ ಇದೀಗ 200 ವರ್ಷಗಳು ತುಂಬಿವೆ. ಇದರ ಸವಿನೆನಪಿಗಾಗಿ ಅದ್ಧೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ನಮ್ಮ ನಾಡು ವೀರತ್ವದ ಗುಣ ಹೊಂದಿದೆ. ಇಲ್ಲಿಶರಣಾಗತಿ ಬೇಡಿ ಬಂದವರಿಗೆ ರಕ್ಷಣೆ ನೀಡಿದೆ. ದಂಡೆದ್ದು ಬಂದವರಿಗೆ ಸೋಲಿನ ರುಚಿ ತೋರಿಸಿ ಹಿಮ್ಮೆಟ್ಟಿಸಿದೆ’’, ಎಂದರು. ಮೆರವಣಿಗೆಯಲ್ಲಿ ಮಹಿಳೆಯರು ಡೊಳ್ಳು ಬಾರಿಸಿ ಚನ್ನಮ್ಮನ ಅಭಿಮಾನ ಮೆರೆದರು. ಪ್ರತಿಯೊಬ್ಬರೂ ತಲೆಗೆ ಹಳದಿ ಪೇಟ ಧರಿಸಿ ಮೆರವಣಿಗೆ ಅಂದ ಹೆಚ್ಚಿದರು. ವಿವಿಧ ವಾದ್ಯಗಳು ರಂಗು ತುಂಬಿದವು. ಬೈಲಹೊಂಗಲ ತಹಸೀಲ್ದಾರ ಹನುಮಂತ ಶಿರಹಟ್ಟಿ, ಬಸವರಾಜ ಹುಬ್ಬಳ್ಳಿ, ಬಸವರಾಜ ಕೆರಕನ್ನವರ, ನಾನಾಸಾಹೇಬ ಪಾಟೀಲ, ಕಾಶಿನಾಥ ಇನಾಮದಾರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಮಹಾದೇವ ಕೋಟಗಿ, ಶಿವಾನಂದ ದಿವಾಣದ, ಶ್ರೀಕಾಂತ ಹಡಗಿನಹಾಳ, ಮಹಾದೇವ ಮಡಿವಾಳರ, ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಪ್ರಹ್ಲಾದ ಘಂಟಿ, ಮಹಾಂತೇಶ ದಿವಾಣದ, ಬಸವರಾಜ ಪೂಜೇರಿ, ಬಸನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now