Chennai News:
ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ದಕ್ಷಿಣ ಪೀಠದ ಕಟ್ಟುನಿಟ್ಟಿನ ನಿರ್ದೇಶನದ ನಂತರ ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಡಿಸೆಂಬರ್ 23 ರೊಳಗೆ ತ್ಯಾಜ್ಯವನ್ನು ತೆರವುಗೊಳಿಸುವಂತೆ ಎನ್ ಜಿಟಿ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಹಾಯಕ ಕಲೆಕ್ಟರ್ ಆಲ್ಬರ್ಟ್ ನೇತೃತ್ವದ ಕೇರಳದ ತಂಡವು ತ್ಯಾಜ್ಯ ತೆರವು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಬಿಸಾಡಲಾಗಿದ್ದ ವೈದ್ಯಕೀಯ ತ್ಯಾಜ್ಯವನ್ನು ಮರಳಿ ತರಲು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ತಂಡವೊಂದನ್ನು ನಿಯೋಜಿಸಿದೆ.
ತ್ಯಾಜ್ಯವನ್ನು ಕೇರಳಕ್ಕೆ ಮರಳಿ ತರಲು ಎಂಟು ಟ್ರಕ್ ಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿದ ತಿರುನೆಲ್ವೇಲಿಯಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದ ಕ್ರಮಕ್ಕೆ ಸುತ್ತಮುತ್ತಲಿನ ನಡುಕಲ್ಲೂರ್, ಕೊಡಗನಲ್ಲೂರ್, ಕೊಂಡನಗರಂ ಮತ್ತು ಸುತಮಲ್ಲಿಯಂತಹ ಪ್ರದೇಶಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎಸೆಯಲಾದ ತ್ಯಾಜ್ಯ ಅಪಾಯಕಾರಿಯಲ್ಲ ಎಂದು ಕೇರಳ ಪರಿಶೀಲನಾ ತಂಡ ಹೇಳಿರುವ ಬಗ್ಗೆ ತಿರುನೆಲ್ವೇಲಿ ಜಿಲ್ಲಾಧಿಕಾರಿ ಕಾರ್ತಿಕೇಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ಅಪಾಯಕಾರಿಯಲ್ಲ ಎಂದಾದರೆ ಅದರ ವಿಲೇವಾರಿಗೆ ಮಧ್ಯವರ್ತಿಗಳನ್ನು ನೇಮಿಸಿದ್ದು ಏಕೆ ಮತ್ತು ಅದಕ್ಕಾಗಿ ಅಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಭವಿಷ್ಯದಲ್ಲಿ ಮತ್ತೆ ಇಂಥ ಘಟನೆ ನಡೆಯದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಕಾರ್ತಿಕೇಯನ್ ಒತ್ತಿ ಹೇಳಿದರು. ಈ ಸಂಬಂಧ ಸುತಮಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 6 ಪ್ರಕರಣಗಳು ದಾಖಲಾಗಿವೆ.
ಕೇರಳದಿಂದ ತ್ಯಾಜ್ಯವನ್ನು ಅಕ್ರಮವಾಗಿ ಸಾಗಿಸಿ ಎಸೆಯುತ್ತಿದ್ದ ಆರೋಪದ ಮೇಲೆ ಕೇರಳದ ಲಾರಿ ಮಾಲೀಕ ಮತ್ತು ಖಾಸಗಿ ತ್ಯಾಜ್ಯ ನಿರ್ವಹಣಾ ಕಂಪನಿಯ ಮೇಲ್ವಿಚಾರಕ ಸೇರಿದಂತೆ ತಿರುನೆಲ್ವೇಲಿಯ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ತಿರುವನಂತಪುರಂ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಮತ್ತು ಕೇರಳದ ಖಾಸಗಿ ಆಸ್ಪತ್ರೆಯಲ್ಲಿನ ದೊಡ್ಡ ಪ್ರಮಾಣದ ಪ್ರಮಾಣದ ಬಯೋಮೆಡಿಕಲ್, ಪ್ಲಾಸ್ಟಿಕ್ ಮತ್ತು ಆಹಾರ ತ್ಯಾಜ್ಯವನ್ನು ಟ್ರಕ್ಗಳಲ್ಲಿ ತಂದು ತಿರುನೆಲ್ವೇಲಿಯ ಕೊಡಗನಲ್ಲೂರ್ ಮತ್ತು ಪಲವೂರ್ ಗ್ರಾಮಗಳಲ್ಲಿ ಎಸೆಯಲಾಗಿದೆ.
ತ್ಯಾಜ್ಯವು ಬಳಸಿದ ಸಿರಿಂಜ್ಗಳು, ಪಿಪಿಇ ಕಿಟ್ಗಳು ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ವೈದ್ಯಕೀಯ ದಾಖಲೆಗಳಂತಹ ಅಪಾಯಕಾರಿ ವಸ್ತುಗಳನ್ನು ಒಳಗೊಂಡಿದೆ. ಇದರಿಂದ ಸ್ಥಳದಲ್ಲಿ ಗಂಭೀರ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳು ಎದುರಾಗುವ ಆತಂಕ ನಿರ್ಮಾಣವಾಗಿದೆ.ಭೂಮಾಲೀಕರು ಈ ಬಗ್ಗೆ ಪದೇ ಪದೆ ದೂರು ನೀಡುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ.
ಹತ್ತಿರದ ಕಾಗದದ ಕಾರ್ಖಾನೆಗೆ ತ್ಯಾಜ್ಯ ಸಾಗಿಸುವ ಟ್ರಕ್ಗಳು ಈ ಅಕ್ರಮ ಡಂಪಿಂಗ್ ನಲ್ಲಿ ಭಾಗಿಯಾಗಿವೆ ಎಂದು ಪೊಲೀಸರು ಶಂಕಿಸಿದ್ದಾರೆ.ಆಗಾಗ ರಾತ್ರಿ ಸಮಯದಲ್ಲಿ ಇಲ್ಲಿ ತ್ಯಾಜ್ಯಗಳನ್ನು ತಂದು ಎಸೆಯುತ್ತಿರುವುದರಿಂದ ಸ್ಥಳೀಯ ನೀರಿನ ಮೂಲಗಳು ಕಲುಷಿತಗೊಂಡಿವೆ, ಜಾನುವಾರುಗಳಿಗೆ ಅನಾರೋಗ್ಯ ಎದುರಾಗುತ್ತಿದೆ ಮತ್ತು ಜನರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.