ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ಮಧ್ಯರಾತ್ರಿ ವೇಳೆ ಕಾಡಾನೆಗಳು ಓಡಾಡಿವೆ. ಇಲ್ಲಿನ ವಿವಿಧ ರಸ್ತೆಗಳಲ್ಲಿನ ಅಳವಡಿಸಿರುವ ಸಿಸಿಟಿವಿಗಳಲ್ಲಿ ದೃಶ್ಯ ಸೆರೆಯಾಗಿದೆ. ಆನೆಗಳು ನರೀಪುರ ಸಮೀಪದ ಜಮೀನುಗಳಲ್ಲಿ ಓಡಾಟ ನಡೆಸಿವೆ.
ಚಾಮರಾಜನಗರದ ಕೊಳ್ಳೇಗಾಲದಲ್ಲಿ ಕಾಡಾನೆಗಳು ನಾಡು ಪ್ರವೇಶಿಸಿವೆ.
ಆಹಾರ ಅರಸಿ ಅರಣ್ಯದಿಂದ ಹೊರಬಂದ ಎರಡು ಆನೆಗಳು ಕೊಳ್ಳೇಗಾಲದ ದೇವಾಂಗ ಪೇಟೆ, ಮಸೀದಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಪೊಲೀಸ್ ಠಾಣೆ ಸುತ್ತಮುತ್ತ ಓಡಾಡಿವೆ. ಪೆಟ್ರೋಲ್ ಬಂಕ್ ಹಾಗೂ ವಿವಿಧ ಅಂಗಡಿ ಮಳಿಗೆಗಳ ಸಿಸಿಟಿವಿಯಲ್ಲಿ ಓಡಾಟದ ದೃಶ್ಯ ಸೆರೆಯಾಗಿದೆ.
ಈ ಕುರಿತು ಪೆಟ್ರೋಲ್ ಬಂಕ್ ನೌಕರ ಹರೀಶ್ ಮಾತನಾಡಿ, “ರಾತ್ರಿ 10 ಗಂಟೆಯ ಸಮಯದಲ್ಲಿ ಬಂಕ್ ಬಂದ್ ಮಾಡಿ ಮಲಗಿದ್ದೆವು. ರಾತ್ರಿ 2.30ರ ಸುಮಾರಿಗೆ ವಾಚ್ಮೆನ್ ನೀರು ಹಾಕುತ್ತಿದ್ದಾಗ ಅಂಬೇಡ್ಕರ್ ರಸ್ತೆಯಿಂದ ಎರಡು ಆನೆ ಬರುವುದನ್ನು ಕಂಡಿದ್ದಾರೆ. ಬಳಿಕ, ಮಸೀದಿ ರಸ್ತೆಯತ್ತ ತೆರಳಿವೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.