ಪಾಟ್ನಾ(ಬಿಹಾರ): ಬುಡಕಟ್ಟು ಸಮುದಾಯದ ಅಭಿವೃದ್ದಿ ಮತ್ತು ಕುಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಇಂದು ಬುಡಕಟ್ಟು ಜನಾಂಗಗಳ ಸಬಲೀಕರಣಕ್ಕಾಗಿ ಹೋರಾಡಿದ್ದ ಭಗವಾನ್ ಬಿರ್ಸಾ ಮುಂಡಾ ಜನ್ಮಜಯಂತಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ, ಅವರು ಬಿಹಾರಕ್ಕೆ ಪ್ರಯಾಣ ಬೆಳೆಸಲಿದ್ದು, 6,640 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಬಿರ್ಸಾ ಮುಂಡಾ ಅವರ ಜನ್ಮದಿನವನ್ನು 2021ರಿಂದ ಜಂಜಾಟಿಯ ‘ಗೌರವ್ ದಿವಸ್’ ಆಗಿ ಆಚರಣೆ ಮಾಡಲಾಗುತ್ತಿದೆ.
ವಸತಿ, ವೈದ್ಯಕೀಯ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡುವರು. ಈ ಮೂಲಕ ಬುಡಕಟ್ಟು ಸಮುದಾಯದ ಅಭಿವೃದ್ದಿ ಮತ್ತು ಇಲ್ಲಿನ ಕುಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಬಿರ್ಸಾ ಮುಂಡಾ ಗೌರವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಬಿಹಾರಕ್ಕೆ ಪ್ರಧಾನಿ ಮೋದಿ ಅವರ ಎರಡನೇ ಭೇಟಿ ಇದಾಗಿದೆ. ಬುಧವಾರ ದರ್ಭಾಂಗಕ್ಕೆ ಭೇಟಿ ನೀಡಿದ್ದ ಅವರು ಏಮ್ಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.