ವಿಜಯನಗರ: “₹1.20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ 9 ಸಾವಿರ ಕುಟುಂಬಗಳ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಅಮಾನತು ಮಾಡಲಾಗಿದೆ. ಮುಖ್ಯವಾಗಿ, 101 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರು. ಅವುಗಳನ್ನು ರದ್ದುಗೊಳಿಸಲಾಗಿದೆ.
ಬಿಪಿಎಲ್ ಕಾರ್ಡ್ ಅಮಾನತು ಆಗಿರುವ ಬಗ್ಗೆ, ಅರ್ಹ ಕಾರ್ಡ್ದಾರರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ” ಎಂದು ಜಿಲ್ಲೆಯ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಅಮಾನತಾಗಿರುವವರು ತಮ್ಮ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷವಿರುವ ಬಗ್ಗೆ ಆದಾಯ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಿದಲ್ಲಿ, ಅದು ಬಿಪಿಎಲ್ ಕಾರ್ಡ್ ಆಗಿಯೇ ಮುಂದುವರಿಯಲಿದೆ ಎಂದು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
ಹೊಸಪೇಟೆ- 11, ಹಗರಿಬೊಮ್ಮನಹಳ್ಳಿ- 28, ಹೂವಿನಹಡಗಲಿ- 23, ಕೂಡ್ಲಿಗಿ- 16, ಕೊಟ್ಟೂರು- 11, ಹರಪನಹಳ್ಳಿ- 12 ತಾಲೂಕುಗಳಲ್ಲಿ ಒಟ್ಟು 101 ಸರ್ಕಾರಿ ನೌಕರರೇ ಬಿಪಿಎಲ್ ಕಾರ್ಡ್ ಹೊಂದಿದ್ದರು. ಅವರ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ದಂಡ ಹಾಕಲಾಗಿದೆ ಎಂದು ತಿಳಿಸಿದರು.
“ಕುಟುಂಬ ತಂತ್ರಾಂಶದ ಮೂಲಕ ಬಂದ ಮಾಹಿತಿಯ ಪ್ರಕಾರ, ಜಿಲ್ಲೆಯ ಹಡಗಲಿ 89, ಹಗರಿಬೊಮ್ಮನಹಳ್ಳಿ 108, ಹೊಸಪೇಟೆ 492, ಕೂಡ್ಲಿಗಿ 105, ಕೊಟ್ಟೂರು 66, ಹರಪನಹಳ್ಳಿ 171 ಒಟ್ಟು 1031 ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ.
ಅವುಗಳ ಬಗ್ಗೆ ಕ್ರಮ ಕೈಗೊಂಡಿದ್ದು, ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿದೆ” ಎಂದರು.
“ಹಡಗಲಿ- 112, ಹಗರಿಬೊಮ್ಮನಹಳ್ಳಿ- 136, ಹೊಸಪೇಟೆ- 503, ಕೂಡ್ಲಿಗಿ- 121, ಕೊಟ್ಟೂರು- 77, ಹರಪನಹಳ್ಳಿ- 183 ಒಟ್ಟು 1132 ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ” ಎಂದು ತಿಳಿಸಿದರು.
“ಹಡಗಲಿ- 932, ಹಗರಿಬೊಮ್ಮನಹಳ್ಳಿ- 962, ಹೊಸಪೇಟೆ- 1572, ಕೂಡ್ಲಿಗಿ- 1518, ಕೊಟ್ಟೂರು- 1467, ಹರಪನಹಳ್ಳಿ- 2875 ಒಟ್ಟು 9,326 ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿವೆ.
ಅವರ ಕಾರ್ಡ್ಗಳನ್ನು ಅಮಾನತು ಮಾಡಲಾಗಿದೆ. ಇವರು ತಮ್ಮ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಅಧಿಕ ಇಲ್ಲ ಎಂದು ಆದಾಯ ಪ್ರಮಾಣ ಪತ್ರ ದಾಖಲೆಗಳನ್ನು ಸಲ್ಲಿಸಿದಲ್ಲಿ, ಅರ್ಹರಾಗಿದ್ದಲ್ಲಿ ಅಂತಹ ಕಾರ್ಡ್ಗಳನ್ನು ಬಿಪಿಎಲ್ ಕಾರ್ಡ್ಗಳಾಗಿಯೇ ಮುಂದುವರಿಸಲಾಗುತ್ತದೆ” ಎಂದು ಹೇಳಿದರು.
“ಬಿಪಿಎಲ್, ಎಪಿಎಲ್ ಕಾರ್ಡ್ಗಳ ಅಪ್ಡೇಟ್ ಕೆಲಸಕ್ಕೆ ಕರೆಂಟ್ ಹೋದರೆ ಯುಪಿಸಿ ಇಲ್ಲದಿರುವುದರಿಂದ ಬಹಳ ಸಮಸ್ಯೆ ಆಗುತ್ತದೆ. ಇಲ್ಲಿ ದ್ವೀತಿಯ ದರ್ಜೆ ಸಹಾಯಕರು ಮಾತ್ರ ಇದ್ದಾರೆ. ಯಾವುದೇ ಕಂಪ್ಯೂಟರ್ ಆಪರೇಟರ್, ಕಚೇರಿ ಸಹಾಯಕರು ಇಲ್ಲ.
ಬಿಪಿಎಲ್ ಕಾರ್ಡ್ಗಳನ್ನು ಪರೀಶಿಲನೆ ಮಾಡಿ, ಯತಾಸ್ಥಿತಿಗೆ ಮಾಡಬೇಕಿದೆ. ಜನರ ಮೊಬೈಲ್ಗಳಿಗೆ ಎಸ್ಎಂಎಸ್ ಹೋಗಿದೆ. ಜನ ಆತಂಕದಿಂದ ಇಲಾಖೆ ಕಚೇರಿಗೆ ಬರುತ್ತಿದ್ದಾರೆ. ಪರೀಶಿಲನೆ ಮಾಡಿ ನ್ಯಾಯ ಬೆಲೆ ಅಂಗಡಿ ಮೂಲಕ ಯಥಾಸ್ಥಿತಿಗೆ ಮಾಡಲಾಗುತ್ತದೆ.
ಹೊಸಪೇಟೆ ತಾಲೂಕಿನಲ್ಲಿ ಒಬ್ಬ ಮುಖ್ಯಲಿಪಿಕಾರು ಹಾಗೂ ಒಬ್ಬ ಎಸ್ಡಿಎ ಮಾತ್ರ ಇದ್ದಾರೆ” ಎಂದು ಮುಖ್ಯ ಲಿಪಿಕಾರ ರುದ್ರೇಶ್ ತಿಳಿಸಿದರು.
“ವಿಜಯನಗರ ಜಿಲ್ಲೆಯಾಗಿ 4 ವರ್ಷ ಕಳೆದರೂ ಇಲ್ಲಿಯ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದೆ.
ಆಹಾರ ಮತ್ತು ಸರಬರಾಜು ಇಲಾಖೆಯ ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ತಾಲೂಕುಗಳಲ್ಲಿ ಆಹಾರ ನಿರೀಕ್ಷಕರು ಇಲ್ಲ. ಹಾಗಾಗಿ ಬೇರೆ ಇಲಾಖೆಯ ಸಿಬ್ಬಂದಿಯನ್ನು ನೇಮಕ ಮಾಡಿ, ಅವರಿಂದ ಕೆಲಸ ಮಾಡಿಸುತ್ತಿದ್ದೇವೆ” ಎಂದರು.
ರೇಷನ್ ಕಾರ್ಡ್ನಲ್ಲಿ ಅಮಾನತು ಹಾಗೂ ಐಟಿ ಎಂದು ಬಂದಿದ್ದರೆ ಗ್ರಾಹಕರ ಕುಟುಂಬದ ಪ್ರತಿಯೊಬ್ಬರ ಸದಸ್ಯರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಎರಡು ಫೋಟೋಗಳನ್ನು ತಂದು ತಹಶೀಲ್ದಾರ್‌ಗೆ ಮನವಿ ಪತ್ರ ಬರೆದು, ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
ಅದನ್ನು ಪರಿಶೀಲನೆ ಮಾಡುತ್ತೇವೆ. ಹೊಸಪೇಟೆ ತಾಲೂಕಿನ ಗ್ರಾಮೀಣ ಮತ್ತು ನಗರದಲ್ಲಿ ಒಟ್ಟು 59 ಸೊಸೈಟಿಗಳಿವೆ. ಪ್ರತಿ ಸೊಸೈಟಿಯ ಕನಿಷ್ಠ 40ರಿಂದ 50 ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ಇವೆ. ಇಬ್ಬರು ಆಹಾರ ನಿರೀಕ್ಷಕರು ಬೇಕು” ಎಂದರು.