ಮುಂಬೈ (ಮಹಾರಾಷ್ಟ್ರ): ಮುಂಬೈ ನಗರದಲ್ಲಿ ಪ್ರವೇಶ ಮಾಡುವ ಲಘು ಮೋಟಾರು ವಾಹನಗಳಿಗೆ ಟೋಲ್ ದರ ಮನ್ನಾ ಮಾಡುವುದಾಗಿ ಸೋಮವಾರ ಅಕ್ಟೋಬರ್ 14ರ ಮಧ್ಯ ರಾತ್ರಿಯಿಂದ ಈ ಹೊಸ ಆದೇಶ ಹೊರಡಿಸಿದೆ.
ಮುಂಬೈ ಮಹಾ ನಗರದ ಸುತ್ತಲೂ ಇರುವ ಐದು ಟೋಲ್ ಬೂತ್‌ಗಳಲ್ಲಿ ಕಾರುಗಳೂ ಸೇರಿದಂತೆ ಎಲ್ಲ ರೀತಿಯ ಲಘು ಮೋಟಾರು ವಾಹನಗಳಿಗೆ ಇನ್ಮುಂದೆ ಟೋಲ್ ಇರೋದಿಲ್ಲ.
ಇದೇ ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಇಂಥಾದ್ದೊಂದು ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಟೋಲ್ ಮನ್ನಾ ಮಾಡಬೇಕು ಅನ್ನೋದು ಜನರ ಬಹು ದಿನಗಳ ಬೇಡಿಕೆಯಾಗಿತ್ತು.
ಮುಂಬೈ ನಗರಕ್ಕೆ ಪ್ರವೇಶ ಪಡೆಯುವ ವಾಹನಗಳು ದಹೀಸರ್, ಆನಂದ್ ನಗರ, ವೈಶಾಲಿ, ಐರೋಲಿ ಹಾಗೂ ಮುಲುಂದ್ ಪ್ರದೇಶಗಳಲ್ಲಿ ಇರುವ ಟೋಲ್‌ಗಳನ್ನು ದಾಟಿ ಬರಬೇಕು. ಮುಂಬೈ ನಗರದ ಸುತ್ತಲೂ ಇರುವ ಎಲ್ಲಾ ಟೋಲ್‌ಗಳಲ್ಲೂ ಲಘು ಮೋಟಾರು ವಾಹನಗಳು ಇನ್ಮುಂದೆ ಹೆದ್ದಾರಿ ಟೋಲ್ ಹಣ ಕಟ್ಟಬೇಕಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ದಾದಾಜಿ ದಗದು ಭೂಸೇ ಅವರು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ.
2026ರವರೆಗೆ ಟೋಲ್ ಸಂಗ್ರಹ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಇದೀಗ 2024ಕ್ಕೇ ಟೋಲ್ ಸಂಗ್ರಹ ಮೊಟಕುಗೊಳ್ಳಲಿದೆ.
ಮುಂಬೈ ಸುತ್ತಲಿನ ಈ ಐದೂ ಟೋಲ್ ಬೂತ್‌ಗಳಲ್ಲಿ 45 ರೂ. ನಿಂದ 75 ರೂ. ವರೆಗೆ ಪ್ರತಿ ಲಘು ಮೋಟಾರು ವಾಹನ (ಎಲ್‌ಎಂವಿ) ಟೋಲ್ ಹಣ ಭರಿಸಬೇಕಿತ್ತು. ಆದರೆ ಈ ಎಲ್ಲಾ 5 ಟೋಲ್ ಬೂತ್‌ಗಳಲ್ಲಿ ಪ್ರತಿ ದಿನ 3.5 ಲಕ್ಷ ವಾಹನಗಳು ಪ್ರಯಾಣಿಸುತ್ತವೆ. ಹಲವು ತಿಂಗಳಿಂದ ಈ ಕುರಿತಾಗಿ ಚರ್ಚೆಗಳು ನಡೆಯುತ್ತಿದ್ದವು. ಇದೀಗ ನಮ್ಮ ಸರ್ಕಾರ ಇಂಥಾದ್ದೊಂದು ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.