ಮೈಸೂರು: ಪಕ್ಷಿಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಮೈಸೂರಿನ ‘ಅರ್ಲಿ ಬರ್ಡ್’ ಸಂಸ್ಥೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್ ಕಿ ಬಾತ್’ ಕಾರ‍್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.‘‘ಮೈಸೂರಿನ ‘ಅರ್ಲಿ ಬರ್ಡ್’ ಮಕ್ಕಳಿಗಾಗಿ ವಿನೂತನ ಅಭಿಯಾನ ಆರಂಭಿಸಿದೆ.
ಮೈಸೂರಿನಲ್ಲಿ ಅರ್ಲಿ ಬರ್ಡ್ ಎಂಬ ಸರ್ಕಾರೇತರ ಸಂಸ್ಥೆಯೊಂದಿದೆ. ಈ ಸಂಸ್ಥೆಯು ನಮ್ಮ ಪರಿಸರದಲ್ಲಿ ವಾಸಿರುವ ಪಕ್ಷಿಗಳನ್ನು ಸಂರಕ್ಷಿಸುವ ಗುರಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಜೊತೆಗೆ ಕೈ ಜೋಡಿಸಿ, ಮಕ್ಕಳಲ್ಲಿ ಪಕ್ಷಿಗಳ ಬಗ್ಗೆ, ಅವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಈ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನ. 24ರಂದು ಪ್ರಸಾರವಾದ ‘ಮನ್ ಕೀ ಬಾತ್’ ನಲ್ಲಿ ಪ್ರಸ್ತಾಪಿಸಿದ್ದಾರೆ.
ಮಕ್ಕಳಿಗೆ ಪಕ್ಷಿ, ಪ್ರಕೃತಿಯ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ವಿಶೇಷ ರೀತಿಯ ಗ್ರಂಥಾಲಯವನ್ನು ನಡೆಸುತ್ತಿದೆ. ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲು ‘ನೇಚರ್ ಎಜುಕೇಶನ್ ಕಿಟ್’ ನೀಡುತ್ತಿದೆ,’’ ಎಂದು ಮೋದಿ ಮಾಹಿತಿ ನೀಡಿದರು.
ಈ ಕಿಟ್‌ನಲ್ಲಿಮಕ್ಕಳಿಗೆ ಬೇಕಾದ ಕಥೆ ಪುಸ್ತಕಗಳು, ಆಟಿಕೆಗಳು ಹಾಗೂ ವಿವಿಧ ಸಾಮಗ್ರಿಗಳು ಇರುತ್ತವೆ. ಈ ಸಂಸ್ಥೆಯು ಮಕ್ಕಳನ್ನು ನಗರಗಳಿಂದ ಹಳ್ಳಿಗಳಿಗೆ ಕರೆದೊಯ್ದು ಪಕ್ಷಿಗಳ ಹೆಸರು, ಅವುಗಳ ಚಲನವಲನ ಹಾಗೂ ಜೀವನ ಕ್ರಮಗಳನ್ನು ಪರಿಚಯಿಸುತ್ತದೆ. ಇದರಿಂದ ಇಂದು ಅನೇಕ ಮಕ್ಕಳು ನಾನಾ ಜಾತಿಯ ಪಕ್ಷಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಮತ್ತು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಜೊತೆಗೆ ಮಕ್ಕಳಲ್ಲಿವಿಭಿನ್ನ ದೃಷ್ಟಿಕೋನ ಬೆಳೆಸಲು ನೆರವಾಗಿದೆ, ಎಂದು ಹೇಳಿದರು.
ಕಳೆದ 10 ವರ್ಷದ ಹಿಂದೆ ಮೈಸೂರಿನಲ್ಲಿ‘ಅರ್ಲಿ ಬರ್ಡ್’ ಸಂಸ್ಥೆ ಪ್ರಾರಂಭವಾಯಿತು. ಇದು ನೇಚರ್ ಕನ್ಸರ್ವೇಷನ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಮಕ್ಕಳಿಗೆ ಪಕ್ಷಿಗಳನ್ನು ಪರಿಚಯಿಸುವ ಮೂಲಕ ಪರಿಸರದ ಅರಿವನ್ನು ಮೂಡಿಸುವುದು ಅರ್ಲಿ ಬರ್ಡ್ ಸಂಸ್ಥೆ ಉದ್ದೇಶವಾಗಿದೆ. ನಗರದಲ್ಲಿರುವ ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ದು ಪಕ್ಷಿ ಸಂಕುಲದ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ತಿಳಿಸಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಅರ್ಲಿ ಬರ್ಡ್ ಪಕ್ಷಿ ಶಿಕ್ಷಣ ತರಬೇತಿ ಕಾರ‍್ಯಕ್ರಮವನ್ನು ರಾಜ್ಯದ ವಿವಿಧೆಡೆ ನಡೆಸಿದೆ. ಪರಿಸರದಲ್ಲಿಕಂಡು ಬರುವ ಪಕ್ಷಿಗಳನ್ನು ವೀಕ್ಷಣೆ ಮಾಡುವುದರ ಜೊತೆಗೆ ಮಕ್ಕಳಲ್ಲೂಇಂಥ ಹವ್ಯಾಸ ಬೆಳೆಸುವುದು ನಮ್ಮ ಉದ್ದೇಶ. ಇದಕ್ಕಾಗಿ 500 ಗ್ರಾಪಂ ಅರಿವು ಕೇಂದ್ರಗಳ (ಗ್ರಂಥಾಲಯ) ಮೇಲ್ವಿಚಾರಕರಿಗೆ ಪಕ್ಷಿಗಳ ಕುರಿತು ತರಬೇತಿ ನೀಡಲಾಗಿದೆ. ಪಕ್ಷಿಗಳ ವೀಕ್ಷಣೆ, ಅವುಗಳ ಗುರುತಿಸುವಿಕೆ, ಸರಳವಾಗಿ ಹಕ್ಕಿಗಳ ಚಿತ್ರ ಬಿಡಿಸುವುದು ಸೇರಿದಂತೆ ಹಲವು ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ‍್ಯಕ್ರಮದಲ್ಲಿನಮ್ಮ ಸಂಸ್ಥೆ ಕೆಲಸವನ್ನು ಶ್ಲಾಘಿಘಿಸಿದ್ದು ಖುಷಿಕೊಟ್ಟಿದೆ. ಮುಂದಿನ ದಿನಗಳಲ್ಲಿಮತ್ತಷ್ಟು ಮಕ್ಕಳಿಗೆ ಪಕ್ಷಿಗಳ ಕುರಿತು ಜಾಗೃತಿ ಮೂಡಿಸಲು ಇದು ಪ್ರೇರಣೆ ನೀಡಿದೆ ಎಂದು ಗರೀಮಾ ಅವರು ಹೇಳಿದ್ದಾರೆ.