ಮಂಡ್ಯ: ಕರ್ನಾಟಕ ರೈತರ ಹೈನುಗಾರಿಕೆಯ ಫಲ ರಾಷ್ಟ್ರ ರಾಜಧಾನಿಯಲ್ಲಿ ಮಿಂಚುತ್ತಿದೆ. ಹೌದು ಭಾರೀ ಬೇಡಿಕೆಯೊಂದಿಗೆ ದೆಹಲಿಯಲ್ಲಿ ಉತ್ತಮವಾಗಿ ಮಾರುಕಟ್ಟೆ ವೃದ್ಧಿಯಾಗುತ್ತಿದೆ.
ಇತರೆ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯ ಹಾಘೂ ಉತ್ತಮ ಗುಣಮಟ್ಟದ ಹಾಲಿನೊಂದಿಗೆ ಆರಂಭದಲ್ಲೇ ಉತ್ತಮ ಮಾರಾಟ ಕಾಣುತ್ತಿರುವ ನಂದಿನಿ ಮುಂದಿನ ಕೆಲವೇ ದಿನದಲ್ಲಿ ನಿರೀಕ್ಷಿತ ಗುರಿ 50 ಸಾವಿರ ಲೀಟರ್ ಹಾಲು ಮೊಸರು ಮಾರಾಟದ ಗುರಿ ತಲುಪಲಿದೆ ಎಂಬುದು ಕೆಎಂ ಎಫ್ ಅಧಿಕಾರಿಗಳ ಮಾತಾಗಿದೆ.
ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಹಾಲು ಮಾರುಕಟ್ಟೆ ವಿಸ್ತರಣೆಯತ್ತ ಹೆಜ್ಜೆ ಇಟ್ಟಿರುವ ನಂದಿನಿ, ಗುಣಮಟ್ಟ, ಕಡಿಮೆ ದರದೊಂದಿಗೆ ಸ್ಥಳೀಯ ಕ್ಷೀರ ಸಂಸ್ಥೆಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಈಗಾಗಲೇ ಅಮುಲ್, ಮದರ್ ಡೇರಿ ಬ್ರ್ಯಾಂಡ್‌ನ ಕಂಪನಿಗಳು ದಿಲ್ಲಿ ಹಾಲಿನ ಮಾರುಕಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಂಡಿವೆ.
ಅಮುಲ್, ಮದರ್ ಡೇರಿ ಹಾಲಿಗಿಂತಲೂ ಕಡಿಮೆ ದರ ನಂದಿನಿ ಹಾಲಿಗಿದೆ. ಹೀಗಾಗಿ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ದರದೊಂದಿಗೆ ಗ್ರಾಹಕರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದೆ. ದಿಲ್ಲಿಯಲ್ಲಿ ಬಿಡುಗಡೆಯಾಗಿರುವ ನಂದಿನಿ ಸ್ಯಾಚೆಟ್ ಹಾಲು ಮೊದಲ ದಿನವೇ 10 ಸಾವಿರ ಲೀಟರ್ ಮಾರಾಟವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಪ್ರಸ್ತುತ ಅಮುಲ್ 35 ಲಕ್ಷ ಲೀಟರ್, ಮದರ್‌ಡೈರಿ 30 ಲಕ್ಷ ಲೀಟರ್ ಹಾಲು, ಮೊಸರು ಮಾರಾಟ ಮಾಡುತ್ತಿವೆ. ಇವುಗಳೊಂದಿಗೆ ನಮಸ್ತೆ ಇಂಡಿಯಾ, ಮಧುಸೂದನ್ ಕಂಪನಿಗಳು ತಲಾ 1.50 ಲಕ್ಷ ಲೀಟರ್ ಹಾಲು, ಮೊಸರನ್ನು ಮಾರುಕಟ್ಟೆಗೆ ಪೂರೈಸುತ್ತಿವೆ. ಹತ್ತಾರು ವರ್ಷಗಳಿಂದ ಬೇರು ಬಿಟ್ಟಿರುವ ಈ ಕಂಪನಿಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಕೆಎಂಎಫ್ ಮತ್ತು ಮಂಡ್ಯ ಮನ್‌ಮುಲ್‌ನ ನಂದಿನಿಗೆ ಗುಣಮಟ್ಟವೇ ಪ್ರಮುಖ ಆಧಾರವಾಗಿದೆ.
ಅಮುಲ್ ಮತ್ತು ಮದರ್ ಡೇರಿ ಹಾಲಿನ ಗುಣಮಟ್ಟವನ್ನು ಪರೀಕ್ಷಿಸಿ, ಅದರೊಂದಿಗೆ ನಂದಿನಿ ಹಾಲನ್ನು ಹೋಲಿಕೆ ಮಾಡಲಾಗಿದೆ. ಈ ಮೂರು ಬ್ರ್ಯಾಂಡ್‌ಗಳಲ್ಲಿ ಕರ್ನಾಟಕದ ರೈತರ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ನ ಹಾಲು ಹೆಚ್ಚು ಗುಣಮಟ್ಟದಿಂದ ಕೂಡಿದೆ.
ದಿಲ್ಲಿಯಲ್ಲಿ ಸಾಮಾನ್ಯವಾಗಿ ಹಸುವಿನ ಹಾಲು ಹೆಚ್ಚಾಗಿ ಮಾರಾಟವಾಗುತ್ತಿದೆ. ಅಮುಲ್, ಮದರ್‌ಡೇರಿ ಎಮ್ಮೆ ಹಾಲನ್ನೇ ಹೆಚ್ಚು ಮಾರಾಟ ಮಾಡುತ್ತಿವೆ. ಹೀಗಾಗಿ ಪರಿಶುದ್ಧ ನಂದಿನಿ ಹಸುವಿನ ಹಾಲಿನ ಮೂಲಕ ಗ್ರಾಹಕರನ್ನು ಸೆಳೆಯಲು ಕೆಎಂಎಫ್ ಮತ್ತು ಮನ್‌ಮುಲ್ ಮಾರುಕಟ್ಟೆ ತಂತ್ರಗಾರಿಕೆ ನಡೆಸುತ್ತಿದೆ. ನಾಲ್ಕು ಪ್ರಮಾಣದ ಹಸಿರು-ಬಿಳಿ ಬಣ್ಣದ ಸ್ಯಾಚೆಟ್‌ಗಳಲ್ಲಿ ಕೌ ಮಿಲ್ಕ್ ಹೆಸರಿನಲ್ಲೇ ಹಸುವಿನ ಹಾಲನ್ನು ದಿಲ್ಲಿಗೆ ಪೂರೈಸುತ್ತಿದೆ.
ದಿಲ್ಲಿಯಲ್ಲಿ ಕೆಎಂಎಫ್ ಮತ್ತು ಮನ್‌ಮುಲ್ ಅಧಿಕಾರಿಗಳು, ಸಿಬ್ಬಂದಿ ನಡೆಸಿರುವ ಬೇಡಿಕೆ ಸಮೀಕ್ಷೆ ಪ್ರಕಾರ ಕೆಲವೇ ತಿಂಗಳಲ್ಲಿ 70 ಸಾವಿರ ಲೀಟರ್ ಹಾಲು ಮತ್ತು ಮೊಸರು ಮಾರಾಟದ ಗುರಿಯನ್ನು ಹೊಂದಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೊಂದು ತಿಂಗಳಲ್ಲಿ 50 ಸಾವಿರ ಲೀಟರ್ ಹಾಲು ಮತ್ತು ಮೊಸರು ಮಾರಾಟದ ಗುರಿಯನ್ನು ತಲುಪುತ್ತೇವೆ ಎಂಬ ಭರವಸೆ ಮನ್‌ಮುಲ್ ಅಧಿಕಾರಿಗಳದ್ದು.
10 ರೂ.ಗೆ 160ಎಂಎಲ್, 28ರೂ.ಗೆ 500ಎಂಎಲ್, 56 ರೂ.ಗೆ ಒಂದು ಲೀಟರ್, 336ರೂ.ಗೆ 6ಲೀಟರ್ ಹಸುವಿನ ಹಾಲು ದಿಲ್ಲಿ ಜನರಿಗೆ ಸಿಗಲಿದೆ. ಜತೆಗೆ, ಸಹಕಾರ ಕ್ಷೇತ್ರದಲ್ಲೇ ಭಾರತದಲ್ಲೇ ಅತ್ಯಧಿಕ ಹಾಲು ಮಾರಾಟವಾಗುವ 2ನೇ ಬ್ರ್ಯಾಂಡ್ ನಂದಿನಿ ಹಾಲು ಎಂಬ ಸಂಗತಿಯನ್ನು ಕೆಎಂಎಫ್ ಪ್ರಚುರಪಡಿಸುತ್ತಿದೆ.
6 ಲೀಟರ್‌ಗೆ 402 ಹಾಗೂ ಸಂಪೂರ್ಣ ಹೆಸರಿನ ನೀಲಿ-ಬಿಳಿ ಬಣ್ಣದ ಪಾಕೆಟ್‌ನ 500ಮಿಲಿಗೆ 27ರೂ., ಒಂದು ಲೀಟರ್‌ಗೆ 55ರೂ. ಮಾರಾಟ ಮಾಡುತ್ತಿದೆ.ಶುಭಂ ಹೆಸರಿನ ಕೇಸರಿ-ಬಿಳಿ ಬಣ್ಣದ ಪಾಕೆಟ್‌ನ 500ಮಿಲಿ ಹಾಲಿಗೆ 30ರೂ., ಒಂದು ಲೀಟರ್‌ಗೆ 61ರೂ. ದರ ನಿಗದಿಯಾಗಿದೆ. ಸಮೃದ್ಧಿ ಹೆಸರಿನ ನೇರಳೆ-ಬಿಳಿ ಬಣ್ಣದ ಪ್ಯಾಕೆಟ್‌ನ 500ಮಿಲಿಗೆ 33ರೂ., ಒಂದು ಲೀಟರ್‌ಗೆ 67ರೂ
ಹೋಟೆಲ್, ದರ್ಶಿನಿಗಳು ಮತ್ತು ಕ್ಯಾಂಟೀನ್ ಮಾಲೀಕರನ್ನು ಸೆಳೆಯುವ ನಿಟ್ಟಿನಲ್ಲಿ ಹಸುವಿನ ಹಾಲು ಹಾಗೂ ಸಮೃದ್ಧಿ ಹೆಸರಿನ ಹಾಲನ್ನು 6 ಲೀಟರ್ ಸ್ಯಾಚೆಟ್‌ಗಳಲ್ಲಿ ನಂದಿನಿ ಹಾಲನ್ನು ಕೆಎಂಎಫ್ ಪೂರೈಸಲಾಗುತ್ತಿದೆ.