ಬೆಂಗಳೂರು: ಈಗಾಗಲೇ ಬೆಲೆ ಏರಿಕೆಗೆ ಜನ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಸರ್ಕಾರ ಹೊಸ ವರ್ಷಕ್ಕೆ ಮತ್ತೊಂದು ಶಾಕ್ ಕೊಡಲು ಮುಂದಾಗಿದೆ. ಕಳೆದ ಬಾರಿ ನಂದಿನಿ ಹಾಲಿನ ದರವನ್ನ ಎರಡು ರೂಪಾಯಿಗೆ ಏರಿಕೆ ಮಾಡಿದ್ದ ಸರ್ಕಾರ ಈಗ ಪ್ರತಿ ಲೀಟರ್‌ಗೆ 5 ರೂಪಾಯಿ ಏರಿಕೆ ಮಾಡಲು ಚಿಂತನೆ ನಡೆಸಿದೆ.
ಪ್ರತಿ ಲೀಟರ್‌ಗೆ ನಂದಿನಿ ಹಾಲಿನ ದರವನ್ನು ಎರಡು ರೂಪಾಯಿ ಏರಿಕೆ ಮಾಡಿದ್ದ ಸರ್ಕಾರದ ಈಗ ಮತ್ತೆ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ. 5 ರೂಪಾಯಿ ಏರಿಕೆ ಮಾಡಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹಾಲು ಮಹಾ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಚಳಿಗಾಲದ ಅಧಿವೇಶನದ ಬಳಿಕ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ.
ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಜನರಿಗೆ ಬರೆ ಎಳೆದಂತಾಗಿದೆ. ಹೇಗೋ ಜೀವನ ಸಾಗಿಸ್ತಿರೋ ಜನರಿಗೆ ರಾಜ್ಯ ಸರ್ಕಾರ ಬರೆ ಮೇಲೆ ಬರೆ ಎಳೆಯೋದಕ್ಕೆ ನಿರ್ಧಾರ ಮಾಡಿದಂತೆ ಕಾಣ್ತಿದೆ. ಹೊಸ ವರ್ಷಕ್ಕೆ ನಂದಿನಿ ಹಾಲಿನ ದರವನ್ನ ಏರಿಕೆ ಮಾಡೋದಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈ ವಿಷಯ ಕೇಳೇ ಜನರಿಗೆ ಶಾಕ್ ಹೊಡೆದಂತಾಗಿದೆ.
ನಂದಿನಿ ಟೋನ್ಡ್ ಹಾಲು 44 ರೂ., ಹೇಮೋಜಿನೈಸ್ಡ್ ಟೋನ್ಡ್ ಹಾಲು 45 ರೂ., ಶುಭಂ ಹಾಲು 50 ರೂ., ಹೋಮೋಜಿನೈಸ್ಡ್ ಶುಭಂ ಹಾಲು 51 ರೂ., ಸಮೃದ್ಧಿ ಹಾಲು 53 ರೂ., ಸ್ಪೆಷಲ್ ಹಾಲು 50 ರೂ., ಸಂತೃಪ್ತಿ ಹಾಲು 57 ರೂ., ಶುಭಂ ಗೋಲ್ಡ್ ಹಾಲು 51 ರೂ., ಡಬಲ್ ಟೋನ್ಡ್ ಹಾಲು 43 ರೂ. ಇದೆ.
ಡಿಸೆಂಬರ್ 19ರವೆಗೂ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಬಳಿಕ ಡಿಸೆಂಬರ್ 20ರಂದು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಡಿಸೆಂಬರ್ 21 ಅಥವಾ 22ರಂದು ಸಿಎಂ ಸಭೆ ಮಾಡಲಿದ್ದು, ಸಭೆ ಬಳಿಕ ಹಾಲಿನ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಂದುಕೊಂಡಂತೆ ಆದ್ರೆ ಜನವರಿ 1ರಿಂದ ನೂತನ ದರ ಜಾರಿಯಾಗಲಿದೆ.