ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾದಕ ಪದಾರ್ಥ ಸರಬರಾಜು ಪ್ರಕರಣಗಳ ಆರೋಪಿಗಳು, ಅನುಮಾನಾಸ್ಪದ ವ್ಯಕ್ತಿಗಳು ಹಾಗು ರೌಡಿಶೀಟರ್‌ಗಳನ್ನು ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷಾಚರಣೆಯ ವೇಳೆ ನಗರದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾದಕ ಪದಾರ್ಥ ಸರಬರಾಜು ಪ್ರಕರಣಗಳ ಆರೋಪಿಗಳು, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ರೌಡಿಶೀಟರ್‌ಗಳನ್ನ ವಿಚಾರಣೆ ನಡೆಸಲಾಗಿದೆ. ಪಬ್, ವೈನ್ ಸ್ಟೋರ್ಸ್, ಬಾರ್ & ರೆಸ್ಟೋರೆಂಟ್‌ಗಳು, ಸ್ಥಳೀಯ ಡಾಬಾ, ಹೋಟೆಲ್ ಮತ್ತು ಲಾಡ್ಜ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ನವೆಂಬರ್ 29 ಹಾಗೂ 30ರಂದು ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎಚ್ಚರಿಕೆ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಈ ಪರಿಶೀಲನೆಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ. ಸುಮಾರು 411 ವಿದೇಶಿಗರನ್ನು ಪರಿಶೀಲಿಸಲಾಗಿದ್ದು, ವೀಸಾ ಅವಧಿ ಮೀರಿ ನಗರದಲ್ಲಿ ವಾಸವಾಗಿದ್ದ 29 ಜನರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕೇಂದ್ರ (FRRO)ದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ವಾಪಸ್ ಕಳಿಸಲು ಕ್ರಮ ಕೈಗೊಳ್ಳಲಾಗಿದೆ.
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಭಾಗವಾಗಿ ನವೆಂಬರ್ 30ರಂದು ನಗರದಲ್ಲಿನ 460 ಶಾಲಾ, ಕಾಲೇಜುಗಳು ಮತ್ತು 302 ಹಾಸ್ಟೆಲ್ಗಳಿಗೆ ಭೇಟಿ ನೀಡಿ 61,398 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಸೈಬರ್ ಅಪರಾಧ ಮತ್ತು ಕಾನೂನುಗಳು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ 12 ಜನ ಮಹಿಳೆಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಬೇರೆ ಬೇರೆ ವಯೋಮಾನದ 16 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.