ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ಧಾರೆ.
ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕಾಂಗ್ರೆಸ್ ಅಥವಾ ಯಾವುದೇ ‘ಇಂಡಿ’ ಬ್ಲಾಕ್ ಪಾಲುದಾರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಳ್ಳಿಹಾಕಿದ್ದಾರೆ. “ದೆಹಲಿ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇರುವುದಿಲ್ಲ” ಎಂದು ಕೇಜ್ರಿವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎಎಪಿ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿದ್ದವು. ಆದರೆ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದಿದ್ದರಿಂದ ಮೈತ್ರಿ ವಿಫಲವಾಗಿತ್ತು. ದೆಹಲಿಯ ಮಾಳವೀಯ ನಗರದಲ್ಲಿ ಶನಿವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವ್ಯಕ್ತಿಯೊಬ್ಬ ಕೇಜ್ರಿವಾಲ್ ಮೇಲೆ ಯಾವುದೋ ದ್ರಾವಣವೊಂದನ್ನು ಸಿಂಪಡಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ನಾನು ಮಾಡಿರುವ ತಪ್ಪಾದರೂ ಏನು?” ಎಂದು ಪ್ರಶ್ನಿಸಿದ್ದಾರೆ. ಅಕ್ಟೋಬರ್ನಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಗೆ ಮೊದಲು ಎಎಪಿ ಮತ್ತು ಕಾಂಗ್ರೆಸ್ ಮಧ್ಯೆ ಸೀಟು ಹಂಚಿಕೆ ಮಾತುಕತೆ ನಡೆದಿದ್ದವು. ಆದರೆ ಮಾತುಕತೆಗಳು ವಿಫಲವಾದವು. ಈ ಚುನಾವಣೆಯಲ್ಲಿಯೂ ಬಿಜೆಪಿ ಗೆದ್ದಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಪಾದಯಾತ್ರೆಯ ಸಮಯದಲ್ಲಿ ಬೆಂಬಲಿಗರೊಂದಿಗೆ ಕೈ ಕುಲುಕುತ್ತಿದ್ದಾಗ ಕೇಜ್ರಿವಾಲ್ ಮೇಲೆ ದ್ರಾವಣ ಸಿಂಪಡಿಸಲಾಗಿತ್ತು. ದಾಳಿಕೋರನ ಬಳಿ ಸ್ಪಿರಿಟ್ ಮತ್ತು ಬೆಂಕಿ ಪೊಟ್ಟಣಗಳಿದ್ದವು ಹಾಗೂ ಇದು ಕೇಜ್ರಿವಾಲ್ ಅವರಿಗೆ ಬೆಂಕಿ ಹಚ್ಚುವ ಪ್ರಯತ್ನವಾಗಿತ್ತು ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಎಎಪಿಯ ಆರೋಪಗಳನ್ನು ತಕ್ಷಣವೇ ನಿರಾಕರಿಸಿದ ಬಿಜೆಪಿ, ಈ ಘಟನೆಯನ್ನು “ಪ್ರಚಾರದ ಸ್ಟಂಟ್” ಎಂದು ಕರೆದಿದೆ. ಎಎಪಿ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ್, ಅನುಕಂಪ ಗಳಿಸಲು ಈ ಘಟನೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಅವರೊಂದಿಗೆ ಮಾತ್ರ ಏಕೆ ನಡೆಯುತ್ತಿವೆ ಎಂದು ದೆಹಲಿ ಜನ ಆಶ್ಚರ್ಯ ಪಡುತ್ತಿದ್ದಾರೆ ಎಂದು ಸಚ್ ದೇವ್ ಹೇಳಿದರು.
“ನಾನು ಕಾನೂನು ಮತ್ತು ಸುವ್ಯವಸ್ಥೆ ವಿಷಯದ ಬಗ್ಗೆ ಮಾತನಾಡಿದ ನಂತರ ಅಮಿತ್ ಶಾ ಏನಾದರೂ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಅದರ ಬದಲು ಪಾದಯಾತ್ರೆಯ ಸಮಯದಲ್ಲಿ ನನ್ನ ಮೇಲೆ ಹಲ್ಲೆ ನಡೆಸಲಾಯಿತು. ಯಾವುದೋ ದ್ರವವನ್ನು ನನ್ನ ಮೇಲೆ ಎಸೆಯಲಾಯಿತು. ಸದ್ಯ ಅದು ಅಪಾಯಕಾರಿಯಾಗಿರಲಿಲ್ಲ, ಆದರೆ ಅದು ಅಪಾಯಕಾರಿಯೂ ಆಗಿರಬಹುದಿತ್ತು.” ಎಂದು ಕೇಜ್ರಿವಾಲ್ ಹೇಳಿದರು.
ದ್ರಾವಣ ಸಿಂಪಡಿಸಿದ ಆರೋಪಿಯನ್ನು ದೆಹಲಿ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿರುವ 41 ವರ್ಷದ ಬಸ್ ಮಾರ್ಷಲ್ ಅಶೋಕ್ ಝಾ ಎಂದು ಗುರುತಿಸಲಾಗಿದೆ. ಆರು ತಿಂಗಳಿನಿಂದ ಸಂಬಳ ಸಿಗದ ಹತಾಶೆಯಿಂದ ಝಾ ಈ ಕೃತ್ಯ ಎಸಗಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆರೋಪಿ ಕೇಜ್ರಿವಾಲ್ ಮೇಲೆ ನೀರು ಸಿಂಪಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now