ನವದೆಹಲಿ: ದೆಹಲಿ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಆಟೋ ಚಾಲಕರಿಗೆ ಭರ್ಜರಿ ಕೊಡುಗೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (AAP) ಭರಪೂರ ಘೋಷಣೆಗಳನ್ನು ಹೊರಡಿಸುತ್ತಿದೆ. ಈಗಾಗಲೇ ಇರುವ ಉಚಿತಗಳ ಮುಂದುವರಿಕೆ, ಹಿರಿಯ ನಾಗರಿಕರಿಗೆ ಪಿಂಚಣಿ ಪುನಾರಂಭದ ಭರವಸೆ ನೀಡಿದೆ. ಇದೀಗ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಂಗಳವಾರ ಈ ಪ್ರಕಟಣೆ ಮಾಡಿದ್ದು, ನಗರದ ನೋಂದಾಯಿತ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುವುದು. ಸಮವಸ್ತ್ರ ಭತ್ಯೆಯಾಗಿ ವರ್ಷಕ್ಕೆ ₹5 ಸಾವಿರ ನೀಡುವುದಾಗಿ ಘೋಷಿಸಿದರು.
ಆಟೋ ಚಾಲಕರ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಸರ್ಕಾರದಿಂದ 1 ಲಕ್ಷ ರೂಪಾಯಿ ನೆರವು ಸಿಗಲಿದೆ. ಆಟೋ ಪ್ರಯಾಣದ ಬುಕಿಂಗ್ಗಾಗಿ ‘ಪೂಚೋ’ ಆ್ಯಪ್ ಅನ್ನು ಮರುಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಕೊಂಡ್ಲಿ ಕ್ಷೇತ್ರದಲ್ಲಿ ಆಟೋ ಚಾಲಕನ ಕುಟುಂಬ ಸದಸ್ಯರೊಂದಿಗೆ ಭೋಜನ ಸವಿದ ಕೇಜ್ರಿವಾಲ್, ಆಟೋ ಚಾಲಕರ ಆರೋಗ್ಯಕ್ಕೆ ಆದ್ಯತೆ ನೀಡಲಾಗುವುದು. ಸಮವಸ್ತ್ರ ಭತ್ಯೆಯಾಗಿ ವರ್ಷಕ್ಕೆ ಎರಡು ಬಾರಿ 2,500 ರೂಪಾಯಿ ಸರ್ಕಾರ ನೀಡಲಿದೆ. ಆಟೋ ಚಾಲಕರ ಮಕ್ಕಳಿಗೆ ಉಚಿತ ತರಬೇತಿ ಕೊಡಿಸಲಾಗುವುದು ಎಂದು ಇದೇ ವೇಳೆ ಆಶ್ವಾಸನೆ ನೀಡಿದರು.
ಪೂಚೋ (ಕೇಳು) ಆ್ಯಪ್ ಅನ್ನು ಈ ಹಿಂದೆಯೇ ಆರಂಭಿಸಲಾಗಿದೆ. ಆದರೆ, ಕಾರಣಾಂತರಗಳಿಂದ ಇದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆ್ಯಪ್ ಮೂಲಕ ಆಟೋ ಪ್ರಯಾಣ ಬುಕ್ ಮಾಡಬಹುದು. ಆ್ಯಪ್ನಲ್ಲಿರುವ ನೋಂದಾಯಿತ ಚಾಲಕರ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಪ್ರಯಾಣಿಕರು ಸೇವೆ ಪಡೆಯಬಹುದಾಗಿದೆ.
ಅಬಕಾರಿ ಹಗರಣದಲ್ಲಿ ಸಿಲುಕಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೇಜ್ರಿವಾಲ್, ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪಕ್ಷವನ್ನು ಮತ್ತೆ ಶತಾಯಗತಾಯ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರವರಿಯೊಳಗೆ ಚುನಾವಣೆ ನಡೆಯಲಿದೆ.
2015ರಿಂದ ಎರಡು ಅವಧಿಗೆ ದೆಹಲಿ ದರ್ಬಾರ್ ನಡೆಸಿರುವ ಆಪ್ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದೆ. ಇತ್ತ, 25 ವರ್ಷಗಳಿಂದ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಸರ್ಕಾರ ರಚನೆ ಮಾಡಲು ತಂತ್ರ ರೂಪಿಸಿದೆ. ವಿಪಕ್ಷಗಳ I.N.D.I.A ಮೈತ್ರಿಕೂಟದಲ್ಲಿದ್ದರೂ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದು ಆಪ್ ಈಗಾಗಲೇ ಘೋಷಿಸಿದೆ.