ಹೈದರಾಬಾದ್ : ಒಲಿಂಪಿಕ್ ಡಬಲ್ ಮೆಡಲ್ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಸೆಮಣೆಯನ್ನು ಏರಲಿದ್ದಾರೆ ಎಂದು ತಿಳಿಸಿದೆ.
ವೆಂಕಟದತ್ತ ಸಾಯಿ ಅವರ ಜೊತೆ, ಡಿಸೆಂಬರ್ 22ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
ಸಿಂಧು ಭಾವೀ ಪತಿ, ಐಪಿಎಲ್ ಫ್ರಾಂಚೈಸ್ ಜೊತೆ ನಂಟನ್ನೂ ಹೊಂದಿದ್ದವರು.
ಹೈದಾರಾಬಾದ್ ನಿವಾಸಿಯಾಗಿರುವ ವೆಂಕಟದತ್ತ ಸಾಯಿ, ಪೊಸಿಡೆಕ್ಸ್ ಟೆಕ್ನಾಲಜಿ ಎನ್ನುವ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕಳೆದ ಭಾನುವಾರ ( ಡಿ 1), ಲಕ್ನೋದಲ್ಲಿ ನಡೆದ ಸಯ್ಯದ್ ಮೋದಿ ಟ್ರೋಫಿಯನ್ನು ಗೆದ್ದ ಬೆನ್ನಲ್ಲೇ, ಮದುವೆಯ ಘೋಷಣೆಯಾಗಿದೆ.
ಮದುವೆಯ ಶಾಸ್ತ್ರಗಳೆಲ್ಲಾ ಮುಗಿದ ನಂತರ, ಮುಂದಿನ ಸೀಸನ್ ಗೆ ತರಬೇತಿಯನ್ನು ಸಿಂಧು ಆರಂಭಿಸಲಿದ್ದಾರೆ. ಸಿಂಧು ಅವರ ಭಾವೀ ಪತಿ ವೆಂಕಟದತ್ತ ಸಾಯಿ, ಲಿಬರಲ್ ಆರ್ಟ್ಸ್ ಎಂಡ್ ಸೈನ್ಸ್ ನಲ್ಲಿ ಡಿಪ್ಲೊಮೋ ಪದವಿಯನ್ನು ಪಡೆದಿದ್ದಾರೆ.
ಡಿ.20ರಿಂದ ಮದುವೆಯ ಶಾಸ್ತ್ರ ಆರಂಭವಾಗಲಿದ್ದು, ಡಿ. 24ಕ್ಕೆ ಎರಡು ಕುಟುಂಬದವರು ಜಂಟಿಯಾಗಿ ಹೈದರಾಬಾದ್ ನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ.
” ಎರಡೂ ಕುಟುಂಬಗಳು ಪರಿಚಯಸ್ಥರಾಗಿದ್ದರೂ, ಒಂದು ತಿಂಗಳ ಹಿಂದೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಪೂರ್ಣಗೊಂಡವು” ಎಂದು, ಪಿ.ವಿ.ಸಿಂಧು ಅವರ ತಂದೆ ಪಿ.ವಿ.ರಮಣ ಹೇಳಿದ್ದಾರೆ.
ಹಣಕಾಸು ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿರುವ ವೆಂಕಟದತ್ತ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೂ ಕೆಲಸ ಮಾಡಿದ್ದಾರೆ. ಹಣಕಾಸು ವಿಭಾಗದಲ್ಲಿ ಪದವಿಯನ್ನು ಪಡೆದಿದ್ದರಿಂದ, ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕೆಲಸ ನಿರ್ವಹಿಸಲು ಸುಲಭವಾಯಿತು ಎಂದು ವೆಂಕಟದತ್ತ ಸಾಯಿ ಬರೆದುಕೊಂಡಿದ್ದಾರೆ.
ಬಿಬಿಎ ಮತ್ತು ಮಾಸ್ಟರ್ಸ್ ಡಿಗ್ರಿಯನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಪ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಪಡೆದಿರುವ ವೆಂಕಟದತ್ತ, ಜಿಂದಾಲ್ ಸ್ಟೀಲ್ಸ್ ನಲ್ಲೂ ಕೆಲಸವನ್ನು ನಿರ್ವಹಿಸಿದ್ದರು. ಹಣಕಾಸು, ಡೇಟಾ ಸೈನ್ಸ್ ನಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಅನುಭವ ನನ್ನ ವೃತ್ತಿ ಜೀವನಕ್ಕೆ ಬಹಳಷ್ಟು ಸಹಾಯವಾಯಿತು ಎಂದು ಹೇಳಿರುವ ವೆಂಕಟದತ್ತ ಸಾಯಿ, 2019ರಲ್ಲಿ ಸೋರ್ ಆಪಲ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಎಂಡಿಯಾಗಿ ಮತ್ತು ಪೊಸಿಡೆಕ್ಸ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು.
ಲಕ್ನೋದಲ್ಲಿ ನಡೆದ ಸಯ್ಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಚೀನಾದ ವುಲುಯು ಅವರನ್ನು 21 – 14, 21 – 16 ಅಂತರದಲ್ಲಿ ಸೋಲಿಸಿ, ಸಿಂಧು ಟ್ರೋಫಿ ಗೆದ್ದಿದ್ದರು. 2017 ಮತ್ತು 2022ರಲ್ಲೂ ಸಿಂಧು, ಪ್ರಶಸ್ತಿಯನ್ನು ತನ್ನಾದಾಗಿಸಿಕೊಂಡಿದ್ದರು.