ಹಾಸನ: ಚಾರುಕೀರ್ತಿ ಶ್ರೀಗಳ ನಿಷಿಧಿ ಮಂಟಪವನ್ನು 3ನೇ ಬೆಟ್ಟವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶ್ರವಣಬೆಳಗೊಳ ಜೈನಮಠದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟ, ವಿಂಧ್ಯಗಿರಿಯ ಬಾಹುಬಲಿ ಬೆಟ್ಟ ಹೇಗೆ ಲೋಕಪ್ರಸಿದ್ಧಿಯಾಗಿದೆಯೋ ಹಾಗೆಯೇ ಕ್ಷೇತ್ರದಲ್ಲಿ 5 ದಶಕಗಳ ಕಾಲ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗು ಸಾಂಸ್ಕೃತಿಕವಾಗಿ ಅನನ್ಯ ಸೇವೆ ಸಲ್ಲಿಸಿ ಕ್ಷೇತ್ರಕ್ಕೆ ವಿಶ್ವಮನ್ನಣೆ ಗಳಿಸಿಕೊಟ್ಟಿರುವ ಚಾರುಕೀರ್ತಿ ಶ್ರೀಗಳ ನಿಷಿಧಿ ಮಂಟಪವನ್ನು 3ನೇ ಬೆಟ್ಟವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜೈನಮಠಧ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಮಠದ ರಸ್ತೆಯಲ್ಲಿರುವ ಕಾನಜಿ ಸ್ವಾಮಿ ಯಾತ್ರಿಕಾಶ್ರಮದಲ್ಲಿಂದು ಮಾತನಾಡಿದ ಅವರು, 2,300 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಅಮೂಲ್ಯ 573 ಶಿಲಾ ಶಾಸನಗಳು ದಾಖಲಾಗಿದ್ದು, ರಾಷ್ಟ್ರದಲ್ಲಿಯೇ ಅತೀ ಹೆಚ್ಚು ಶಿಲಾ ಶಾಸನಗಳನ್ನು ಹೊಂದಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಶ್ರೀಗಳ ನಿಷಿಧಿ ಮಂಟಪದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜೈನ ಮಠಗಳ ಎಲ್ಲಾ ಮಠಾಧೀಶರರು ಆದಿಚುಂಚನಗಿರಿ, ಪೇಜಾವರ, ಸಿದ್ಧಗಂಗಾ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜಕೀಯ ಮುಖಂಡರುಗಳು ಸಾಕ್ಷಿಯಾಗಲಿದ್ದಾರೆ. 10 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಶ್ರೀಗಳ ಸ್ಮರಣೆಗಾಗಿ ಸಾರ್ವಜನಿಕರಿಗೆ ಅವರಿಗೆ ಪ್ರಿಯವಾದ ಮಾವಿನ ಹಣ್ಣಿನ 10 ಸಾವಿರ ಗಿಡಗಳನ್ನು ಮತ್ತು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 54 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವುದರೊಂದಿಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಹೈಮಾಸ್ಟ್ ದೀಪಗಳನ್ನು ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಹೇಳಿದರು.