ಬೆಳಗಾವಿ: ನಗರದ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿ ದರ ಏಕಾಏಕಿ ಇಳಿಕೆ ಮಾಡಿದ ವ್ಯಾಪಾರಿಗಳ ಧೋರಣೆ ಖಂಡಿಸಿ ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂಗಾರು ಮಳೆಗೆ ರೈತರ ಈರುಳ್ಳಿ ಬೆಳೆ ಕೊಳೆತು ನಾಶವಾಗಿ ಮಾರುಕಟ್ಟೆಗೆ ಬಾರದ ಕಾರಣ ಈರುಳ್ಳಿಗೆ ಡಿಮ್ಯಾಂಡ್ ಹೆಚ್ಚಾಗಿ ಬೆಲೆಯೂ ಹೆಚ್ಚಾಗಿತ್ತು. ಇದೀಗ ಬೆಳಗಾವಿಯಲ್ಲಿ ಎಪಿಎಂಸಿ ವರ್ತಕರು ಅತ್ಯಂತ ಕಡಿಮೆ ಬೆಕೆಗೆ ಈರುಳ್ಳಿ ಕೇಳುತ್ತಿದ್ದಾರೆ ಎಂಬುದು ರೈತರಿಗೆ ನೋವುಂಟು ಮಾಡಿದೆ.
”ಸದ್ಯ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ದರ 3,500ದಿಂದ 4,200 ರೂ.ವರೆಗೆ ಇದೆ. ಕೆಲ ದಿನಗಳ ಹಿಂದೆ ಒಂದು ಕ್ವಿಂಟಲ್ ಈರುಳ್ಳಿ ಬೆಲೆ 5,500 ರಿಂದ 4,500 ರೂ ಇತ್ತು. ಇನ್ನು ಕಳಪೆ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್‌ಗೆ 400ರಿಂದ 200 ರೂ. ಇದೆ. ಇಂಥ ಈರುಳ್ಳಿಯನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಹೀಗಾಗಿ ವ್ಯಾಪಾರಸ್ಥರು ಕಡಿಮೆ ದರಕ್ಕೆ ಖರೀದಿ ಮಾಡುತ್ತಿದ್ದಾರೆ,” ಎಂದು ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದರು.
”ಬೆಳಗಾವಿ ಜಿಲ್ಲೆಯಲ್ಲಿ 4,059 ಹೆಕ್ಟೇರ್ ಪ್ರದೇಶದಲ್ಲಿಈರುಳ್ಳಿ ಬಿತ್ತನೆ ಮಾಡಲಾಗಿದೆ. ಅಕ್ಟೋಬರ್‌ನಲ್ಲಿಸುರಿದ ಮಳೆಗೆ ಈ ಪೈಕಿ 350ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಹಾನಿ ಸರ್ವೆ ನಡೆಯುತ್ತಿದೆ,” ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಪಿಎಂಸಿಯಲ್ಲಿಈರುಳ್ಳಿ ದರವನ್ನು ವ್ಯಾಪಾರಗಳೇ ನಿರ್ಧಾರ ಮಾಡುತ್ತಾರೆ. ಈರುಳ್ಳಿ ಗುಣಮಟ್ಟದ್ದಾಗಿದ್ದರೂ ಕಡಿಮೆ ದರಕ್ಕೆ ಕೇಳುತ್ತಾರೆ. ಇಂಥ ವ್ಯಾಪಾರಿಗಳ ವಿರುದ್ಧ ಎಪಿಎಂಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ ನಾಯಕ, ರೈತ ಮುಖಂಡ ಹೇಳಿದ್ದಾರೆ.