ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಸಾಕ್ಸಿಗಾಗಿ ಗಂಟೆಗಟ್ಟಲೆ ಕಾದು ಸುಸ್ತಾದ ಪ್ರಯಾಣಿಕರೊಬ್ಬರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅವರು ಸೋಮವಾರ ರಾತ್ರಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 1 ರಲ್ಲಿ ಲ್ಯಾಂಡ್ ಆಗಿದ್ದರು. ಬೆಂಗಳೂರು ಸಿಟಿಗೆ ಪ್ರಯಾಣಿಸಬೇಕಿದ್ದ ಅವರು ಟ್ಯಾಕ್ಸಿಯನ್ನು ಅವಲಂಬಿಸಿದ್ದರು.
ಟ್ಯಾಕ್ಸಿಗಾಗಿ ಬಂದಾಗ ಸ್ಥಳದಲ್ಲಿ ಉದ್ದನೆಯ ಸಾಲು ಇದ್ದು, ಈ ಸಾಲಲ್ಲಿ ನಿಂತು ಒಂದು ತಾಸಿಗೂ ಹೆಚ್ಚು ಕಾಲ ತಮ್ಮ ಟ್ಯಾಕ್ಸಿಗಾಗಿ ಕಾದಿರುವುದಾಗಿ ತಿಳಿಸಿದ್ದಾರೆ.
ಕೊನೆಗೂ ತಮ್ಮ ಸರದಿಯ ಉಬರ್ ಕ್ಯಾಬ್ ಬಂದಿದೆ. ಆದರೆ ಉಬರ್ ಕ್ಯಾಬ್ ಚಾಲಕ “ನಾನು ಯಲಹಂಕ ಮಾತ್ರ ಹೋಗುವುದು, ಯಲಹಂಕಕ್ಕೆ ಹೋಗುವವರು ಬಂದು ಕಾರಿನಲ್ಲಿ ಕುಳಿತುಕೊಳ್ಳಿ” ಎಂದಿದ್ದಾನೆ ಎಂದು ತಮಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಅಭಿಪ್ರಾಯಕ್ಕೆ ಎಕ್ಸ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಟ್ಯಾಕ್ಸಿ ಮಾಫಿಯಾ, ಅವಶ್ಯಕತೆಯನ್ನು ಸೃಸ್ಟಿಸಿ ಹೆಚ್ಚು ಸುಲಿಗೆ ಮಾಡುವ ಕಾರಣಕ್ಕೆ ಈ ತಂತ್ರವನ್ನು ಬಳಸಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಬಿಎಂಟಿಸಿ ಸಂಸ್ಥೆಯ ವಾಯುವಜ್ರ ನಗರದ ಎಲ್ಲಾ ಭಾಗಗಳಿಗೂ ಸಂಪರ್ಕಿಸುತ್ತಿವೆ. ಟ್ಯಾಕ್ಸಿಗಿಂತ ವಾಯುವಜ್ರ ಉತ್ತಮವಾಗಿದೆ ಎಂದು ಸಲಹೆ ನೀಡಿದ್ದಾರೆ.