ಬೆಂಗಳೂರು: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಧಾವಂತದಲ್ಲಿ ರೈಲು ನಿಲ್ದಾಣಕ್ಕೆ ಓಡುವುದಲ್ಲದೆ, ಟಿಕೆಟ್ ಪಡೆಯಲೂ ಸಹ ಮೂರ್ನಾಲ್ಕು ಕಡೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳುವ ಗೋಳು ತನ್ಮುಂದೆ ಕಡಿಮೆ ಆಗಲಿದೆ.
ಹೌದು ಪ್ರಯಾಣಿಕರ ಅನುಕೂಲಕ್ಕಾಗಿ ದಟ್ಟಣೆ ಸಂದರ್ಭದಲ್ಲಿ ನಗರದ ಮೂರು ನಿಲ್ದಾಣಗಳಲ್ಲಿ ಹೊಸ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಟ್ಟಣೆ ಇರುವ ಸಂದರ್ಭದಲ್ಲಿ ರೈಲು ನಿಲ್ದಾಣದ ಆವರಣದಲ್ಲಿ ರೈಲ್ವೆ ಸಿಬ್ಬಂದಿ ಪ್ರಯಾಣಿಕರು ಇದ್ದಲ್ಲಿಗೇ ತೆರಳಿ ಟಿಕೆಟ್ ವಿತರಿಸುವ ಎಂ-ಯುಟಿಎಸ್(ಮೊಬೈಲ್-ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ ) ಎಂಬ ವ್ಯವಸ್ಥೆಯನ್ನು ನೈರುತ್ಯ ರೈಲ್ವೆಯು ಪರಿಚಯಿಸಿದೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಮತ್ತು ಯಶವಂತಪುರ ನಿಲ್ದಾಣದಲ್ಲಿ ಈ ವ್ಯವಸ್ಥೆ ಪರಿಚಯಿಸಲಾಗಿದೆ.
ಎಂ-ಯುಟಿಎಸ್ ಯಂತ್ರಗಳ ಮೂಲಕ ಕಾಯ್ದಿರಿಸದ ಪ್ರಯಾಣ ಟಿಕೆಟ್ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಪಡೆಯಬಹುದು.
ನಿಲ್ದಾಣದಿಂದ 500-ಮೀಟರ್ ಅಂತರದಲ್ಲಿ ಎಂ-ಯುಟಿಎಸ್ ಟಿಕೆಟ್ ವಿತರಿಸಲು ಅವಕಾಶವಿದೆ.
”ಹಬ್ಬ, ದೀರ್ಘ ರಜಾ ಅವಧಿಯಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚಿರುತ್ತದೆ.
ಈ ಸಮಯದಲ್ಲಿ ಟಿಕೆಟ್ ಕೌಂಟರ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ರೈಲು ಹೊರಡುವ ಸಮಯವಾದರೂ ಹಲವರಿಗೆ ಟಿಕೆಟ್ ಸಿಗುವುದಿಲ್ಲ.
ಅಂತಹವರು ಟಿಕೆಟ್ ಇಲ್ಲದೆಯೇ ಪ್ರಯಾಣ ಮಾಡುತ್ತಾರೆ. ಇದರಿಂದ ರೈಲ್ವೆ ಇಲಾಖೆಗೂ ನಷ್ಟವಾಗಲಿದೆ. ಇದನ್ನು ತಪ್ಪಿಸಲು ಎಂ-ಯುಟಿಎಸ್ ವ್ಯವಸ್ಥೆ ನೆರವಾಗಲಿದೆ,” ಎನ್ನುತ್ತಾರೆ
ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ.
” ಎಂ-ಯುಟಿಎಸ್ ವ್ಯವಸ್ಥೆಯನ್ನು ಆಯ್ದ ನಿಲ್ದಾಣದಲ್ಲಿ ಜನ ಸಂದಣಿ ಹೆಚ್ಚಿದ್ದಾಗ ಮಾತ್ರ ಬಳಸಲಾಗುತ್ತದೆ. ದೀಪಾವಳಿ, ದಸರಾ, ಗಣೇಶ ಚತುರ್ಥಿ, ಓಣಂ, ಸಂಕ್ರಾಂತಿ, ಹೋಳಿ, ಓಣಂ ಸೇರಿದಂತೆ ವಿಶೇಷ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಕೌಂಟರ್ ಹೆಚ್ಚು ಮಾಡುವುದಕ್ಕೆ ಸ್ಥಳಾವಕಾಶವಿರುವುದಿಲ್ಲ.
ಇಂತಹ ಸಂದರ್ಭಗಳಲ್ಲಿಎಂ-ಯುಟಿಎಸ್ ನೆರವಾಗಲಿದೆ,” ಎಂದು ಹೇಳಿದರು.