ರಾಯಚೂರು: ಪರೀಕ್ಷೆ ಬರೆಯುವಂತೆ ತಹಶೀಲ್ದಾರ್ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದು, ಕೆಲವರು ಪರೀಕ್ಷೆ ಬರೆದರೆ ಇನ್ನು ಕೆಲವರು ಪ್ರತಿಭಟನೆ ಮುಂದುವರಿಸಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗದೇ ಸರ್ಕಾರಿ ಪದವಿ ಕಾಲೇಜಿನ ಮುಂದಿನ ಕುಷ್ಟಗಿ-ಸಿಂಧನೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
“ಪಿಡಿಒ ಸಾಮಾನ್ಯ ಪ್ರಶ್ನೆ ಪ್ರತಿಕೆ ಪರೀಕ್ಷೆಯಲ್ಲಿ ಕೆಪಿಎಸ್ಸಿ ಯಡವಟ್ಟು ಮಾಡಿದೆ.
ಒಂದು ಕೋಣೆಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ 24 ಪ್ರಶ್ನೆ ಪತ್ರಿಕೆಗಳ ಬದಲು ಕೇವಲ 12 ಪ್ರಶ್ನೆ ಪ್ರತಿಕೆಯನ್ನಷ್ಟೇ ಕೆಪಿಎಸ್ಸಿ ಕಳುಹಿಸಿಕೊಟ್ಟಿದೆ. ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ” ಎಂದು ಆರೋಪಿಸಿ, ಅಭ್ಯರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.
ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಆಗಮಿಸಿದ್ದು, ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸ್ಥಳಕ್ಕೆ ಸಿಂಧನೂರು ನಗರ ಠಾಣೆ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿದ್ದು,
“ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಪರೀಕ್ಷಾ ಮೇಲ್ವಿಚಾರಕರು ತಪ್ಪೆಸಗಿರುವುದು ಕಂಡಬಂದಲ್ಲಿ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಯಾರೂ ನಿಮ್ಮ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿಲ್ಲ.
ಗಾಳಿಸುದ್ದಿಗೆ ಕಿವಿಗೊಟ್ಟು ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯಿರಿ. ಒಂದು ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದೇ ಆದಲ್ಲಿ, ಇಡೀ ರಾಜ್ಯದಲ್ಲಿ ಮರುಪರೀಕ್ಷೆ ನಡೆಯುತ್ತದೆ” ಎಂದು ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ಮನವೊಲಿಸಲು ಪ್ರಯತ್ನಿಸಿದರು.