ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಎರಡು ಅಭಿವ್ಯಕ್ತಿಗಳನ್ನು 1976 ರಲ್ಲಿ ತಿದ್ದುಪಡಿಗಳ ಮೂಲಕ ಸೇರಿಸಿದ್ದು ಮತ್ತು ಸಂವಿಧಾನವನ್ನು 1949 ರಲ್ಲಿ ಅಂಗೀಕರಿಸಿರುವ ಅಂಶಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಮರುಪರಿಶೀಲನೆಯ ವಾದಗಳನ್ನು ಒಪ್ಪಿಕೊಂಡರೆ ಅದು ಎಲ್ಲಾ ತಿದ್ದುಪಡಿಗಳಿಗೆ ಅನ್ವಯಿಸುವಂತಾಗುತ್ತದೆ” ಎಂದು ಸಿಜೆಐ ಹೇಳಿದರು.
ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿರುವುದನ್ನು ಪ್ರಶ್ನಿಸಿ ಮಾಜಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್ ಜೈನ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ಕುರಿತಾದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ನ್ಯಾಯಪೀಠ ನವೆಂಬರ್ 22 ರಂದು ಕಾಯ್ದಿರಿಸಿತ್ತು.
ಈ ಅರ್ಜಿಗಳ ಬಗ್ಗೆ ವಿವರವಾದ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸಿಜೆಐ ಹೇಳಿದರು.
‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಎಂದರೇನು ಎಂಬುದನ್ನೂ ಈ ತೀರ್ಪು ಸಮಗ್ರವಾಗಿ ವಿವರಿಸುತ್ತದೆ. ತೀರ್ಪನ್ನು ಅಪ್ ಲೋಡ್ ಮಾಡಿದ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.
ಈ ಹಿಂದೆ, ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು. ಸಿಜೆಐ ಖನ್ನಾ ಅವರು ಶುಕ್ರವಾರ ಆದೇಶವನ್ನು ಪ್ರಕಟಿಸಲಿದ್ದರೂ ಕೆಲ ವಕೀಲರ ಅಡೆತಡೆಗಳಿಂದ ಅಸಮಾಧಾನಗೊಂಡ ಅವರು ಸೋಮವಾರ ಆದೇಶವನ್ನು ಪ್ರಕಟಿಸುವುದಾಗಿ ಹೇಳಿದ್ದರು.
ಪ್ರಸ್ತಾವನೆಯನ್ನು ಅಂಗೀಕರಿಸುವ ದಿನಾಂಕದ ಆಧಾರದಲ್ಲಿ ಪೀಠಿಕೆಗೆ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ನಿರ್ಬಂಧಿಸಲಾಗದು. ಈ ಆಧಾರದ ಮೇಲೆ, ಹಿನ್ನೋಟದ ವಾದವನ್ನು ತಿರಸ್ಕರಿಸಲಾಗಿದೆ. ಇಷ್ಟು ವರ್ಷಗಳ ನಂತರ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ಹೇಳಿದೆ ಎಂದು ಸಿಜೆಐ ಖನ್ನಾ ಹೇಳಿದರು.
ಕಳೆದ ವಿಚಾರಣೆಯಲ್ಲಿ, ಅರ್ಜಿದಾರರಲ್ಲಿ ಒಬ್ಬರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಸಂವಿಧಾನದ 39 (ಬಿ) ವಿಧಿಯ ಬಗ್ಗೆ ಇತ್ತೀಚಿನ 9 ನ್ಯಾಯಾಧೀಶರ ಪೀಠದ ತೀರ್ಪನ್ನು ಆಧರಿಸಿ ವಾದ ಮಾಡಿದ್ದರು. ಇದರಲ್ಲಿ ಆಗಿನ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಬಹುಮತದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಅಯ್ಯರ್ ಮತ್ತು ಚಿನ್ನಪ್ಪ ರೆಡ್ಡಿ ಪ್ರತಿಪಾದಿಸಿದ ಸಮಾಜವಾದಿ ವ್ಯಾಖ್ಯಾನಗಳನ್ನು ಒಪ್ಪಿರಲಿಲ್ಲ.