ಬೆಂಗಳೂರು: ಬೆಂಗಳೂರು ಹೊರತುಪಡಿಸಿ ಇನ್ನು ಹಲವು ರಾಜ್ಯದಲ್ಲಿ ಹೊಸದಾಗಿ 5 ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭ ಮಾಡಲು ಸರ್ಕಾರ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಚಿವ ಶರಣ ಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿರುವ ಸದ್ಯ 22 ವೈದ್ಯ ಕಾಲೇಜುಗಳಿದ್ದು, ಕನಕಪುರ ಮತ್ತು ರಾಮನಗರ ವೈದ್ಯ ಕಾಲೇಜು ಈ ವರ್ಷ ಪ್ರಾರಂಭವಾಗುವ ನಿರೀಕ್ಷೆ ಇದೆ.
ಬಾಗಲಕೋಟೆ, ತುಮಕೂರು, ಕೋಲಾರ, ದಾವಣಗೆರೆ ಮತ್ತು ಬಿಜಾಪುರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಎಲ್ಲಾ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಇಲಾಖೆ ಮೂಲಗಳು ತಿಳಿಸಿವೆ.
ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸಂಬಂದಿಸಿದ ಜಿಲ್ಲೆಯಲ್ಲಿ ಸ್ಥಳ ಆಯ್ಕೆಯಿಂದ ಹಿಡಿದು ಅನೇಕ ಕೆಲಸಗಳನ್ನು ಮಾಡಿಕೊಳ್ಳುವಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.
ಮತ್ತೊಂಡೆ, ರಾಜ್ಯದಲ್ಲಿರುವ ಹೊಸ ವೈದ್ಯಕೀಯ ಕಾಲೇಜುಗಳಿಗೆ ಕಾಯಕಲ್ಪ ಕೊಡಲು ಮುಂದಾಗಿರುವ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಅದಕ್ಕಾಗಿ ಹೆಚ್ಚುವರಿ ನೆರವು ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಇನ್ನೂ ಮೂಲ ಸೌಕರ್ಯ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಕಲ್ಪಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಆರ್ಥಿಕ ನೆರವು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.
ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ 18 ಕಾಲೇಜುಗಳಿಗೆ ಭೇಟಿ ನೀಡಿರುವ ಸಚಿವರು ಅಲ್ಲಿಯ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿದ್ದಾರೆ. ಅಲ್ಲಿರುವ ವಾಸ್ತವ ಸಂಗತಿಗಳನ್ನು ಅರಿತಿದ್ದಾರೆ.
ಹೊಸದಾಗಿ ಪ್ರಾರಂಭಿಸಿರುವ ವೈದ್ಯಕೀಯ ಕಾಲೇಜುಗಳಿಗೆ ಕನಿಷ್ಠ ಮೂಲ ಸೌಲಭ್ಯ ಲಭ್ಯವಾಗಿಲ್ಲ. ಇನ್ನು ಬೋಧಕ ಸಿಬ್ಬಂದಿಗಳು ಹಾಗೂ ತಜ್ಞ ವೈದ್ಯರ ಕೊರತೆ ನೀಗಿಲ್ಲ. ಇಂಥದ್ದೆ ಹತ್ತು ಹಲವು ಸಮಸ್ಯೆ ಹೊತ್ತು ಶಾಸಕರು ಮತ್ತು ಜನಪ್ರತಿನಿಧಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಾವೇ ಖುದ್ದು ಪ್ರವಾಸ ಮಾಡಿದ್ದಾರೆ.
ರಾಮನಗರ ಮತ್ತು ಕನಕಪುರ ವೈದ್ಯ ಕಾಲೇಜಿಗೆ ಇನ್ನೂ ಅತ್ಯಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಡಿಸಿಎಂ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಡೀ ರಾಜ್ಯದ ಬಗ್ಗೆ ಸಮಗ್ರವಾದ ವರದಿಯೊಂದನ್ನು ಅವರು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now