ಬೆಂಗಳೂರು : ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಮುಂದಿನ ತೀರ್ಮಾನ ಆಗುವವರೆಗೆ ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡಿತ್ತು. ಆದ್ದರಿಂದ ಸದ್ಯಕ್ಕೆ ಹೊಸ ನೇಮಕಾತಿ ಅಧಿಸೂಚನೆ ಇಲ್ಲ. ಈ ಕುರಿತು ಈಗ ಮತ್ತೊಂದು ಆದೇಶವನ್ನು ಸರ್ಕಾರ ಹೊರಡಿಸಿದೆ.
ಈ ಕುರಿತು ವೀರಭದ್ರ, ಸರ್ಕಾರದ ಅಧೀನ ಕಾರ್ಯದರ್ಶಿ ಸಿಆಸು ಇಲಾಖೆ (ಸೇವಾ ನಿಯಮಗಳು-1 ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅನಧಿಕೃತ ಟಿಪ್ಪಣಿ ನ. 13, 2024 ಉಲ್ಲೇಖಿಸಿದ್ದಾರೆ. ಸುತ್ತೋಲೆಯು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆ ಹಿಡಿಯುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಅ. 28.2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿದೆ ಎಂದು ಹೇಳಿದೆ.
ಈ ದಿನಾಂಕದ ಪೂರ್ವದಲ್ಲಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದಲ್ಲಿ ಅಥವಾ ಆಯ್ಕೆ ಪ್ರಕ್ರಿಯ ಪ್ರಾರಂಭಗೊಂಡಿದ್ದಲ್ಲಿ ಅಂತಹ ನೇಮಕಾತಿಗಳಿಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ವಯವೇ ಪೂರ್ಣಗೊಳಿಸಬಹುದಾಗಿದೆ. ಮೇಲ್ಕಂಡ ಸೂಚನೆಗಳನ್ನು ಎಲ್ಲಾ ಆಯ್ಕೆ ಪ್ರಾಧಿಕಾರಗಳು/ ನೇಮಕಾತಿ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೆಲವು ದಿನಗಳ ಹಿಂದೆ ಹೊಸದಾಗಿ ಯಾವುದೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚಿಸಿತ್ತು. ಕೆಪಿಎಸ್‌ಸಿ ಮುಂದೆ ವಿವಿಧ ಇಲಾಖೆಗಳ ಹಲವಾರು ನೇಮಕಾತಿ ಪ್ರಸ್ತಾವನೆಗಳು ಬಾಕಿ ಇದ್ದು, ಸರ್ಕಾರದ ಆದೇಶದ ತನಕ ಈ ಅಧಿಸೂಚನೆ ಪ್ರಕಟವಾಗುವುದಿಲ್ಲ.
ಅಕ್ಟೋಬರ್ 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಸಭೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಕುರಿತು ವರದಿ ನೀಡಲು ಏಕಸದಸ್ಯ ಆಯೋಗವನ್ನು ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಅಲ್ಲದೇ ಆಯೋಗದ ವರದಿ ಬರುವ ತನಕ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸದಂತೆ ಸಂಪುಟ ತೀರ್ಮಾನವನ್ನು ಕೈಗೊಂಡಿತ್ತು.
ಸದ್ಯ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಕುರಿತು ವರದಿ ನೀಡಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದೆ. ವರದಿ ಸಲ್ಲಿಕೆ ಮಾಡಲು ಎರಡು ತಿಂಗಳ ಕಾಲಾವಕಾಶವ ನೀಡಲಾಗಿದೆ.
ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಹೆಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ಸರ್ಕಾರ ರಚಿಸಿದೆ.
ಸಚಿವ ಸಂಪುಟವು ಸುಪ್ರೀಂಕೋರ್ಟ್‌ನ ಆಗಸ್ಟ್ . 01. 2024ರ ಆದೇಶದಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಆಯೋಗವನ್ನು ರಚಿಸಿದೆ. ಆಯೋಗದ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ.